ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಶಾಸಕನ ಶವ ಪತ್ತೆ: ಸಿಬಿಐ ತನಿಖೆಗೆ ಆಗ್ರಹ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೆಮ್ತಾಬಾದ್‍ನ ಬಿಜೆಪಿ ಶಾಸಕನ ಮೃತದೇಹ ನಿನ್ನೆ ಮುಂಜಾನೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಮತ್ತೊಮ್ಮೆ ರಾಜಕೀಯ ರಣರಂಗಕ್ಕೆ ವೇದಿಕೆ ಕಲ್ಪಿಸಿದೆ. ಇದು ಆತ್ಮಹತ್ಯೆಯಲ್ಲ, ಬದಲಾಗಿ ಹತ್ಯೆ ನಡೆಸಿ, ನೇಣು ಹಾಕಲಾಗಿದೆ ಎಂದು ಆರೋಪಿಸಿ ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಸ್ಥಿತಿ ಮತ್ತೊಮ್ಮೆ ಬಿಗಡಾಯಿಸಿದೆ.
ಮೃತ ಶಾಸಕರನ್ನು ದೇಬೇಂದ್ರನಾಥ ರೇ ಎಂದು ಗುರುತಿಸಲಾಗಿದೆ. ತಮ್ಮ ಮನೆಯಿಂದ 1 ಕಿ.ಮೀ ದೂರದಲ್ಲಿರುವ ಮಾರ್ಕೆಟ್ ನಲ್ಲಿ ಶಾಸಕರ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶಾಸಕರ ಮನೆಗೆ ಕೆಲವು ಮಂದಿ ಬಂದಿದ್ದು, ಅಲ್ಲದೆ ಅವರನ್ನು ಬಲವಂತವಾಗಿ ಮನೆಯಿಂದ ಹೊರಬರುವಂತೆ ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಶೀಘ್ರವೇ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ನಿನ್ನೆ ಬೆಳಗ್ಗೆ ಸ್ಥಳೀಯರು ನೇಣುಬಿಗಿದ ಸ್ಥಿತಿಯಲ್ಲಿದ್ದ ಶಾಸಕರನ್ನು ಕಂಡು ಗಾಬರಿಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಬಿಜೆಪಿಯೂ ನಮ್ಮ ಶಾಸಕರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಅಲ್ಲದೆ ಈ ಸಂಬಂಧ ಬಿಜೆಪಿ ಮುಖಂಡರೊಬ್ಬರು ಟ್ವೀಟ್ ಮಾಡಿ, ಬಂಗಾಳದಲ್ಲಿ ಬಿಜೆಪಿ ನಾಯಕರ ಹತ್ಯೆಗೆ ಅಂತ್ಯ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತ ವಿಫಲತೆ ಕಂಡಿದೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಉತ್ತರ ದಿಂಜಾಪುರ್ ಪ್ರದೇಶ ಅಧ್ಯಕ್ಷ ಅಮಲ್ ಆಚಾರ್ಯ ಕೂಡ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *