ನೆರೆಪೀಡಿತ ಗದ್ದೆಗೆ ಬದುಕು ಕಟ್ಟೋಣ ಬನ್ನಿ ತಂಡದಿಂದ ಪುನರ್ಜನ್ಮ: 70 ಎಕ್ರೆ ಗದ್ದೆಯಲ್ಲಿ ಸಾಮೂಹಿಕ ನಾಟಿ

ಬೆಳ್ತಂಗಡಿ: ಕಳೆದ ವರ್ಷ ಆಗಸ್ಟ್ 9ರ ವರಮಹಾಲಕ್ಷ್ಮಿ ಪೂಜೆಯ ದಿವಸ ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ನೆರೆ ಬಂದು ಅಪಾರ ಕೃಷಿ ನಾಶದ ಜೊತೆ ಜನಜೀವನದ ಮೇಲೆ ಭಾರೀ ಪರಿಣಾಮ ಬೀರಿದ್ದು, ಈ ವೇಳೆ ಚಾರ್ಮಾಡಿ ಗ್ರಾಮದ ಕೊಳಂಬೆ, ಅಂತರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಜಾಗವನ್ನು ಮರು ನಿರ್ಮಿಸುವ ಕೆಲಸ ಕೈಗೊಳ್ಳುವ ಮೂಲಕ ಮಾದರಿಯಾಗಿದ್ದ ಬದುಕು ಕಟ್ಟೋಣ ಬನ್ನಿ ತಂಡ ಈ ಬಾರಿ ಇನ್ನೊಂದು ಮಾದರಿ ಕಾರ್ಯ ಮಾಡಿದೆ.

ಕಲ್ಮಂಜದ 70 ಎಕರೆಯಷ್ಟು ನೆರೆಪೀಡಿತ ಗದ್ದೆಯಲ್ಲಿ ನಾಟಿ ಮಾಡಿಕೊಡುವ ಸೇವೆಯ ಮೂಲಕ ಸಾಂಪ್ರದಾಯಿಕ ಭತ್ತದ ಕೃಷಿಯನ್ನೂ ಪ್ರೇರೇಪಿಸಿ, ಅಲ್ಲಿನ ಕೃಷಿಕರ ಬಾಳಿನಲ್ಲೂ ಹೊಸ ಭರವಸೆ ಮೂಡಿಸಿದೆ.
ಸ್ಥಳೀಯ ಕೃಷಿಕ ಕಾಂತಪ್ಪ ಮಡಿವಾಳ ಉದ್ಘಾಟನೆ ನೆರವೇರಿಸಿದರು.

ಕಳೆದ ಬಾರಿಯ ನೆರೆಗೆ ಇದೇ ಮೊದಲ ಬಾರಿ ನಿಡಿಗಲ್ ಸೇತುವೆಯಲ್ಲಿ ದಾಖಲೆ ಪ್ರಮಾಣದ ನೀರು ಬಂದು, ಅಕ್ಕ ಪಕ್ಕದ ತೋಟ, ಗದ್ದೆಗಳಿಗೆ ನುಗ್ಗಿತ್ತು.
ಈ ವೇಳೆ ನಿಡಿಗಲ್‌ನ ಸುಮಾರು 70 ಎಕರೆಯಷ್ಟು ಗದ್ದೆಗೆ ಪ್ರವಾಹದ ನೀರು ನುಗ್ಗಿ, ಮರಳು ತುಂಬಿ ಕೃಷಿ ನಾಶವಾದದ್ದೂ ಮಾತ್ರವಲ್ಲದೆ ಗದ್ದೆಯಲ್ಲಿ ಮರಳು ಶೇಖರಣೆಯಾಗಿತ್ತು.

ಈ ಬಾರಿ ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥರಾದ ಉದ್ಯಮಿ, ಲಕ್ಷ್ಮೀ ಗ್ರೂಪ್ಸ್‌ನ ಮೋಹನ್ ಕುಮಾರ್, ಸಂಧ್ಯಾ ಟ್ರೇಡರ್ಸ್‌ನ ರಾಜೇಶ್ ಪೈ ಅವರ ನೇತೃತ್ವದಲ್ಲಿ
ಜು.26 ರ ರವಿವಾರದ ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಒಂದಷ್ಟು ಯುವಕರನ್ನು ಸೇರಿಸಿಕೊಂಡು ಮಾದರಿ ಕೆಲಸ ಮಾಡಿದರು.

ತಾ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ. ಶಶಿಧರ ಕಲ್ಮಂಜ, ಜಯಪ್ರಕಾಶ್ ಉಜಿರೆ, ಕೆಂಪಯ್ಯ ಮಡಿವಾಳ,ರಾಜು ಮಡಿವಾಳ, ಶೀನ ದೇವಾಡಿಗ, ಗ್ರಾ.ಪಂ ಸದಸ್ಯೆ ಕುಸುಮಾ, ರವಿ ಚಕ್ಕಿತ್ತಾಯ, ತಿಮ್ಮಯ್ಯ ನಾಯ್ಕ ಉಜಿರೆ ಹಾಗೂ ಇತರರು ಸಹಕಾರ ನೀಡಿದರು.

Leave a Reply

Your email address will not be published. Required fields are marked *