`ನಿಮ್ಮ ಶೌರ್ಯ ಮತ್ತು ಸಾಹಸ ಇಡೀ ವಿಶ್ವವೇ ಹೊಗಳುತ್ತಿದೆ’ -ಸೈನಿಕರನ್ನು ಕೊಂಡಾಡಿದ ಮೋದಿ!

ಲೇಹ್: ಚೀನಾ-ಭಾರತೀಯ ಸೈನಿಕರ ಸಂಘರ್ಷ ನಡೆದಿರುವ ಲಡಾಖ್ ನ ನಿಮ್ಮೂ ಸೆಕ್ಟರ್ ಗೆ ಇಂದು ದಿಢೀರ್ ಭೇಟಿ ನೀಡಿದ್ದ ಪ್ರಧಾನಿ ಮೋದಿ ಸೈನಿಕರ ಶೌರ್ಯವನ್ನು ಕೊಂಡಾಡಿದ್ದಾರೆ. ಈ ವೇಳೆ ಮಾತಾಡಿದ ಮೋದಿ, ನಿಮ್ಮ ಶೌರ್ಯ ಮತ್ತು ಸಾಹಸ ಇಡೀ ವಿಶ್ವವೇ ಹೊಗಳುತ್ತಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ' ಎಂದರು. ಯಾವ ಎತ್ತರದ ಪ್ರದೇಶದಲ್ಲಿ ನೀವು ಕರ್ತವ್ಯ ನಿರ್ವಹಿಸುತ್ತಿರುವಿರೋ ಅದಕ್ಕಿಂತಲೂ ಎತ್ತರವಾದದ್ದು ನಿಮ್ಮ ಧೈರ್ಯ ಮತ್ತು ಶೌರ್ಯ. ನಿಮ್ಮ ಶೌರ್ಯದ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ನಿಮ್ಮ ಸಾಹಸಗಾಥೆ ದೇಶದ ಪ್ರತಿಯೊಂದು ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮೂ ಸೆಕ್ಟರ್ ಗೆ ಬಂದಿಳಿದ ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಾಣೆ ಇದ್ದರು. ಭೇಟಿ ವೇಳೆ ಪ್ರಧಾನಿ ಮೋದಿ ಸೇನಾಧಿಕಾರಿಗಳಿಂದ ಗಡಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಬಳಿಕ ಭದ್ರತೆಗೆ ನಿಯೋಜನೆಗೊಂಡಿದ್ದ ಯೋಧರ ಜೊತೆಗೆ ಮಾತುಕತೆ ನಡೆಸಿದ್ದರು.

Leave a Reply

Your email address will not be published. Required fields are marked *