ನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ಮೃತದೇಹ ಪತ್ತೆ

ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಕಣಿವೆಯ ಪಿರು ಲೇಕ್‍ಗೆ ಮಗನೊಂದಿಗೆ ಬೋಟಿಂಗ್‍ಗೆ ತೆರಳಿ, ಆರು ದಿನ ಕಳೆದರೂ ನಾಪತ್ತೆಯಾಗಿದ್ದ ಹಾಲಿವುಡ್ ನಟಿ ನಯಾ ರಿವೇರಾ ಮೃತದೇಹ ಇದೀಗ ಪತ್ತೆಯಾಗಿದೆ. ನಯಾ 2009ರಿಂದ 2015ರ ಪ್ರಸಾರವಾಗಿದ್ದ ರ್ಯಾನ್ ಮರ್ಫಿ ಸೀರಿಸ್‍ನಲ್ಲಿ ಕಾಣಿಸಿಕೊಂಡಿದ್ದು, ಬಹಳ ಪ್ರಸಿದ್ದಿ ಪಡೆದುಕೊಂಡಿದ್ದರು.
ನಟಿ ನಯಾ ರಿವೇರಾ ಕಳೆದ ವಾರ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಪಿರು ಲೇಕ್‍ಗೆ ಬೋಟಿನಲ್ಲಿ ಹೋಗಿದ್ದ ವೇಳೆ ಬೋಟ್ ಮಗುಚಿ ಮುಳುಗಿದ್ದರು. ಸದ್ಯಕ್ಕೆ ರಿವೇರಾ ಅವರ ಮೃತದೇಹ ಪತ್ತೆಯಾಗಿದೆ. ಆದರೆ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ಇದು ಆತ್ಮಹತ್ಯೆ ಅಲ್ಲ ಎಂದು ತಿಳಿದುಬಂದಿದೆ ಎಂದು ವೆಂಚುರಾ ಕಂಟ್ರಿ ಶೆರಿಫ್ ಬಿಲ್ ಅಯುಬ್ ತಿಳಿಸಿದ್ದಾರೆ. 33 ವರ್ಷದ ರಿವೇರಾ ಲಾಸ್ ಏಂಜಲೀಸ್ ಸುತ್ತಾಡುವುದಕ್ಕೆ ಒಂದು ಗಂಟೆಯ ಅವಧಿಯವರೆಗೂ ಬೋಟ್‍ವೊಂದನ್ನು ಬಾಡಿಗೆಗೆ ಪಡೆದುಕೊಂಡು ಹೋಗಿದ್ದರು. ಈ ವೇಳೆ ನಟಿ ತಮ್ಮ ಕಿರಿಯ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ಆಕಸ್ಮಿಕವಾಗಿ ಬೋಟ್ ಮುಳುಗಿದೆ ಎನ್ನಲಾಗಿದೆ. ಬುಧವಾರ ಮಧ್ಯಾಹ್ನ ನಟಿ ರಿವೇರಾ ಬೋಟ್ ನಾಪತ್ತೆಯಾಗಿತ್ತು. ನಂತರ ಪೆಟ್ರೋಲ್ ಬೋಟ್‍ಗಳು ಮತ್ತು ಹೆಲಿಕಾಪ್ಟರ್‍ಗಳ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದಾಗ ಬೋಟ್ ಮತ್ತು ಮಗ ಪತ್ತೆಯಾಗಿದ್ದಾನೆ. ಆದರೆ ನಟಿ ರಿವೇರಾ ಮಾತ್ರ ಪತ್ತೆಯಾಗಿರಲಿಲ್ಲ. ಬೋಟ್ ಮುಳುಗುತ್ತಿದ್ದಾಗ ಅಮ್ಮ ನನ್ನನ್ನು ರಕ್ಷಿಸಿ ಬೋಟ್ ಮೇಲೆ ಹತ್ತಿಸಿದ್ದರು. ನಂತರ ನಾನು ಹಿಂದೆ ತಿರುಗಿ ನೋಡಿದಾಗ ಅವರು ನೀರಿನಲ್ಲಿ ಮುಳುಗುತ್ತಿದ್ದರು. ಕೊನೆಗೆ ನೀರಿನಲ್ಲಿ ಮುಳುಗುತ್ತಾ ಕಣ್ಮರೆಯಾಗುವುದನ್ನು ನೋಡಿದೆ ಎಂದು ಮಗ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಹೀಗಾಗಿ ನಟಿ ನಯಾ ರಿವೇರಾ ತಮ್ಮ ಮಗನ ಪ್ರಾಣ ಉಳಿಸಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಹುಶಃ ನಟಿ ಬೋಟಿನಲ್ಲಿ ಸುತ್ತಾಡುತ್ತಿದ್ದಾಗ ಕಣಿವೆಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದೆ. ಈ ವೇಳೆ ಬೋಟ್ ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ. ಆಗ ತಮ್ಮ ಮಗನನ್ನು ಬೋಟ್ ಮೇಲೆ ಹತ್ತಿಸಿ ಕಾಪಾಡಿದ್ದಾರೆ. ಆದರೆ ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಯುಬ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *