ಧರ್ಮಸ್ಥಳ: ಡ್ರೋನ್ ಬಳಸಿ ಸ್ಯಾನಿಟೈಸೇಷನ್ ಕಾರ್ಯ ಆರಂಭ

ಬೆಳ್ತಂಗಡಿ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಒಂದು ಸಾವಿರ ಯುವಕರ ತಂಡ ಒಂದು ಸಾವಿರ ಗ್ರಾಮಗಳಲ್ಲಿ ಅತ್ಯಾಧುನಿಕ ಮಟ್ಟದ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯಕ್ಕೆ ಇಳಿದಿದ್ದು ಇದೊಂದು ಮಾದರಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಇಂದು ಶ್ರೀಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಅವರ ಶಿಷ್ಯರಾದ ಡಾ| ಕಾರ್ತಿಕ್ ನಾರಾಯಣ್ ಮತ್ತು ಚೆನೈನ ಅಣ್ಣಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ| ಸೆಂಥಿಲ್ ಕುಮಾರ್ ನೇತೃತ್ವದ ಸುಧಾರಾಧನಾ ತಂಡ ಮತ್ತು ಎಸ್‍ಪಿ ರವಿ ಚೆನ್ನಣ್‍ರವರ ಮಾರ್ಗದರ್ಶನದಲ್ಲಿ ಕೊರೊನಾ ಸೋಂಕು ತಡೆಗೆ ಡ್ರೋನ್ ಮೂಲಕ ಸಾವಯವ ಸ್ಯಾನಿಟೈಸರ್ ಸಿಂಪಡನೆಗೆ ಚಾಲನೆ ನೀಡಿ ಮಾತನಾಡಿದರು. `16 ಲೀಟರ್ ದ್ರವ ತುಂಬಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ನಿರಂತರ ಐದು ಘಂಟೆಗಳ ಕಾಲ ಬಳಸಬಹುದು. ಚೆನೈನ ಅಣ್ಣಾ ವಿಶ್ವವಿದ್ಯಾಲಯದ ಎಂ.ಐ.ಟಿ.ಯಲ್ಲಿ ನಿರ್ಮಿಸಲಾದ ಬ್ಯಾಟರಿ ಚಾಲಿತ ಡ್ರೋನ್ ಇದರಲ್ಲಿದ್ದು ಯಾವುದೇ ಕಟ್ಟಡದ ಹೊರಾವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬಹುದು’ ಎಂದು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದಲ್ಲಿ ಪ್ರಥಮವಾಗಿ ಧರ್ಮಸ್ಥಳ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ಸ್ಯಾನಿಟೈಸೇಶನ್ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್. ಮಂಜುನಾಥ್, ಧರ್ಮಸ್ಥಳ ಗ್ರಾ.ಪಂ. ಆಡಳಿತಾಧಿಕಾರಿ ಡಾ| ಕೆ. ಜಯಕೀರ್ತಿ ಜೈನ್, ಧರ್ಮಸ್ಥಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಮೇಶ್, ಸಿಬ್ಬಂದಿ ಡಾ| ದೇವಿಪ್ರಸಾದ್, ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *