ದ.ಕ. ಜಿಲ್ಲೆಯ ಹಾಸ್ಪಿಟಲ್ ಲಾಬಿಯ ಬಗ್ಗೆ ಜನಪ್ರತಿನಿಧಿಗಳ ಮೌನ, ಜನರ ಅಸಹನೆ!

ಮಂಗಳೂರು: ಬೇರೆ ಜಿಲ್ಲೆಗಳಿಗಿಂತ ಖಾಸಗಿ ಆಸ್ಪತ್ರೆಗಳ ಲಾಬಿ, ದುರ್ವರ್ತನೆಯಲ್ಲಿ ಹೆಚ್ಚು ಸುದ್ದಿಯಲ್ಲಿರೋದು ನಮ್ಮ ದಕ್ಷಿಣ ಕನ್ನಡ ಜಿಲ್ಲೆ. ಕೊರೋನಾ ಸೋಂಕಿತರ ಚಿಕಿತ್ಸೆ ನಿರ್ವಹಣೆಯಲ್ಲಂತೂ ಇದು ಯಾವ ಮಟ್ಟ ತಲುಪಿದೆ ಎಂದರೆ ಜಿಲ್ಲೆಯ ಮಾನ ಮರ್ಯಾದೆ ಹರಾಜು ಹಾಕುವಷ್ಟು. ಸೋಂಕಿತರ ರಿಪೋರ್ಟ್ ಕೊಡಬೇಕಿಲ್ಲ, ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲು ಮಾಡುವಂತಿಲ್ಲ ಎಂಬ ನಿಯಮವನ್ನೇ ಬಳಸಿಕೊಂಡು ಬಡರೋಗಿಗಳ ನೆತ್ತರು ಕುಡಿಯುತ್ತಿರುವ ಆಸ್ಪತ್ರೆಗಳು ಇದ್ದ ಬದ್ದ ರೋಗಕ್ಕೂ ಕೊರೋನಾ ಹೆಸರು ಹಾಕಿ ಲಕ್ಷಾಂತರ ರೂಪಾಯಿ ಪೀಕಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕೊರೋನಾ ಪರೀಕ್ಷೆಗೆ ಸಾವಿರಾರು ರೂಪಾಯಿ ಬಿಲ್ ಮಾಡುವ ಖಾಸಗಿ ಆಸ್ಪತ್ರೆಗಳು ಸದ್ಯ ಯಾರನ್ನೂ ದೋಚದೆ ಹಾಗೇ ಬಿಡುತ್ತಿಲ್ಲ. ರಸ್ತೆಯಲ್ಲಿ ಯಾರಾದರೂ ಅಪಘಾತವಾಗಿ ಬಿದ್ದರೂ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಜನ ಹಿಂದೆ ಮುಂದೆ ನೋಡುವಂತಾಗಿದೆ. ಇದಕ್ಕೆ ಕಾರಣ ಗಾಯಾಳುವಿನ ಜೊತೆಗೆ ಆಸ್ಪತ್ರೆಗೆ ಕರೆದೊಯ್ಯುವವರ ಕೊರೋನಾ ಟೆಸ್ಟ್ ಕೂಡಾ ಮಾಡಿಸುವುದು. ಎರಡು ದಿನಗಳ ಹಿಂದೆ ಇದೇ ರೀತಿ ನಗರದಲ್ಲಿ ಗಾಯಾಳುವನ್ನು ಕರೆದುಕೊಂಡು ಹೋದ ಯುವಕನನ್ನು ಖಾಸಗಿ ಆಸ್ಪತ್ರೆ ಲೂಟಿ ಮಾಡಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ಧಿವಂತರು. ಎಲ್ಲವನ್ನೂ ಪ್ರಶ್ನೆ ಮಾಡುತ್ತಾರೆ ಎಂದು ಗೊತ್ತಿದ್ದರೂ ಜಿಲ್ಲೆಯ ಸಂಸದರು, ಶಾಸಕರು ಮತ್ತು ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮೌನವಾಗಿರುವ ಉದ್ದೇಶವೇನೆಂದು ಜಿಲ್ಲೆಯ ಜನರು ಕೇಳುತ್ತಿದ್ದಾರೆ. ಎಲ್ಲ ಗಂಭೀರ ರೋಗಗಳ ಬಗ್ಗೆ ಆಸ್ಪತ್ರೆ ರಿಪೋರ್ಟ್ ಕೊಡುವಾಗ ಕೊರೋನಾ ಸೋಂಕಿನ ಬಗ್ಗೆ ಯಾಕೆ ಸೋಂಕಿತರ ರಿಪೋರ್ಟ್ ಕೊಡುತ್ತಿಲ್ಲ ಅನ್ನೋದು ಯಕ್ಷಪ್ರಶ್ನೆಯಾಗಿದ್ದು ಇದಕ್ಕೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಹೇಳಿದ್ದ ಮಾತನ್ನು ಜನರು ತಾಳೆ ಮಾಡಿ ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಬರೇ 4 ಮಂದಿ ಸಾವನ್ನಪ್ಪಿದ್ದು ಉಳಿದವರು ಬೇರೆ ಬೇರೆ ರೋಗಗಳಿಗೆ ಬಲಿಯಾಗಿದ್ದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದರು. ಇಲ್ಲಿ ಉದ್ಭವಿಸುವ ಪ್ರಶ್ನೆ ಏನೆಂದರೆ ಬೇರೆ ರೋಗ ಪೀಡಿತರಿಗೂ ಕೊರೋನಾ ಹೆಸರಲ್ಲಿ ಅಡ್ಮಿಟ್ ಮಾಡಿದ ಆಸ್ಪತ್ರೆಗಳು ಲಕ್ಷ ಲಕ್ಷ ಲೂಟಿ ಮಾಡಿದೆಯೇ ಎನ್ನುವುದು. ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತು ಕೊರೋನಾ ಸೋಂಕಿತರ ಚಿಕಿತ್ಸೆ, ಸೋಂಕಿನ ಸಮ್ಮರಿಯನ್ನು ನೀಡುವಂತಾಗಬೇಕು. ಜನರ ಸಂದೇಹಗಳಿಗೆ ಅಂತ್ಯ ಹಾಡಬೇಕು.

Leave a Reply

Your email address will not be published. Required fields are marked *