ದ.ಕ. ಜಿಲ್ಲಾಧಿಕಾರಿ ದಿಢೀರ್ ವರ್ಗ! ಗೋಸಾಗಾಟಗಾರರ ಪರ ವಹಿಸಿದ್ದಕ್ಕೆ ವರ್ಗಾವಣೆ ಶಿಕ್ಷೆ!?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದೆ. ನಿನ್ನೆಯಷ್ಟೇ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ ಗೋವು ಸಾಗಾಟಗಾರರ ಮೇಲಿನ ಹಲ್ಲೆ, ದರೋಡೆ ಕೃತ್ಯಗಳ ಬಗ್ಗೆ ಧ್ವನಿ ಎತ್ತಿದ್ದರು. ಕಾನೂನನ್ನು ಯಾರೇ ಕೈಗೆ ತಗೊಂಡು ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸಿದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಸಿ ವಿರುದ್ಧ ಕೆಲವು ಕಿಡಿಗೇಡಿಗಳು ಬಹಿರಂಗ ಎಚ್ಚರಿಕೆ ನೀಡಿದ್ದು ಕೊಲೆಗೈಯುವ ಬೆದರಿಕೆ ಒಡ್ಡಿದ್ದ ಘಟನೆಯೂ ನಡೆದಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನೂತನ ಜಿಲ್ಲಾಧಿಕಾರಿಯಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಡಾ.ರಾಜೇಂದ್ರ ಕೆ.ವಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.