ದ್ವಿತೀಯ ಟೆಸ್ಟ್: ಆಂಗ್ಲಪಡೆ 207-3

ಮ್ಯಾಂಚೆಸ್ಟರ್: ಇಲ್ಲಿ ಆರಂಭವಾದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯದಲ್ಲಿ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. ಇಂಗ್ಲೆಂಡ್ ಪರ ಡೋಮ್ ಸಿಬ್ಲೆ ಅಜೇಯ 86 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಒಂದು ಹಂತದಲ್ಲಿ 29 ರನ್ ಗಳಿಸುವ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ರೋರಿ ಬನ್ರ್ಸ್ (15) ಹಾಗೂ ಜ್ಯಾಕ್ ಕ್ರೌಲಿ (0) ಬ್ಯಾಟಿಂಗ್‍ನಲ್ಲಿ ವೈಫಲ್ಯತೆ ಕಂಡರು. ಆದರೆ ಸಿಬ್ಲೆ ಈ ವೇಳೆ ತಂಡದ ನೆರವಿಗೆ ನಿಂತರು. ತಂಡಕ್ಕೆ ಕೆಲಹೊತ್ತು ಆಸರೆಯಾಗಿದ್ದ ಜೋ ರೂಟ್ (23) ಕೂಡ ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ಈ ವೇಳೆ ಸಿಬ್ಲೆ ಜೊತೆಗೂಡಿದ ಬೆನ್ ಸ್ಟೋಕ್ಸ್ ನಾಲ್ಕನೇ ವಿಕೆಟ್‍ಗೆ ಅಜೇಯ 126 ರನ್‍ಗಳ ಜೊತೆಯಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಅಂತಿಮವಾಗಿ ಮೊದಲ ದಿನದಂತ್ಯದ ವೇಳೆ ಆಂಗ್ಲಪಡೆ ಮೂರು ವಿಕೆಟ್ ನಷ್ಟಕ್ಕೆ 82 ಓವರ್‍ಗಳಲ್ಲಿ 207 ರನ್ ಗಳಿಸಿದೆ. ಸಿಬ್ಲೆ ತನ್ನ ಇನ್ನಿಂಗ್ಸ್‍ನಲ್ಲಿ ನಾಲ್ಕು ಬೌಂಡರಿ ಸಿಡಿಸಿದರೆ ಸ್ಟೋಕ್ಸ್ ತನ್ನ 59 ರನ್‍ಗಳ ಆಕರ್ಷಕ ಇನ್ನಿಂಗ್ಸ್‍ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಅತ್ತ ವಿಂಡೀಸ್ ಪರ ರೋಲ್ಟನ್ ಚೇಸ್ ಎರಡು ಹಾಗೂ ಅಲ್ಝಾರಿ ಜೋಸೆಫ್ ಒಂದು ವಿಕೆಟ್ ಪಡೆದು ಮಿಂಚಿದರು.

Leave a Reply

Your email address will not be published. Required fields are marked *