ದ್ವಿತೀಯ ಟೆಸ್ಟ್‌: ವಿಂಡೀಸ್‌ಗೆ ಸೋಲು ಸರಣಿಯಲ್ಲಿ ಇಂಗ್ಲೆಂಡ್‌ ಸಮಬಲ

ಮ್ಯಾಂಚೆಸ್ಟರ್‌: ಸ್ಟುವರ್ಟ್‌ ಬ್ರಾಡ್‌ ಹಾಗೂ ಬೆನ್‌ ಸ್ಟೋಕ್ಸ್‌ ಪ್ರದರ್ಶಿಸಿದ ಅಮೋಘ ಪ್ರದರ್ಶನದ ನೆರವಿನಿಂದ ಇಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡ ೧೧೩ ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಆಂಗ್ಲಪಡೆ ೧-೧ ಅಂತರದ ಸಮಬಲ ಸಾಧಿಸಿದೆ.
ನಾಲ್ಕನೇ ದಿನದ ಅಂತ್ಯದ ವೇಳೆಗೆ ಇಂಗ್ಲೆಂಡ್‌ ಎರಡು ವಿಕೆಟ್‌ ನಷ್ಟಕ್ಕೆ ೩೭ ರನ್‌ ಗಳಿಸಿ ಆತಂಕದ ಪರಿಸ್ಥಿತಿ ಎದುರಿಸಿತ್ತು. ಆದರೆ ಬೆನ್‌ ಸ್ಟೋಕ್ಸ್‌ ಐದನೇ ದಿನದಾರಂಭದಲ್ಲೇ ಅಮೋಘ ಹಾಗೂ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಫಲವಾಗಿ ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮವಾಗಿ ಇಂಗ್ಲೆಂಡ್‌ ೧೯ ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ ೧೨೯ ರನ್‌ ಗಳಿಸಿದ್ದ ವೇಳೆ ಇನ್ನಿಂಗ್ಸ್‌ಗೆ ಡಿಕ್ಲೇರ್‌ ಘೋಷಿಸಿತು. ಸ್ಟೋಕ್ಸ್‌ ಕೇವಲ ೫೭ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ ನೆರವಿನಿಂದ ಅಜೇಯ ೭೮ ರನ್‌ ಗಳಿಸಿದ್ದು, ತಂಡಕ್ಕೆ ನೆರವಾಯಿತು. ಈ ಮೂಲಕ ವಿಂಡೀಸ್‌ ಗೆಲುವಿಗೆ ೩೧೧ ರನ್‌ಗಳ ಗುರಿ ನಿಗದಿಪಡಿಸಿತು. ವಿಂಡೀಸ್‌ ಪರ ಬೌಲಿಂಗ್‌ನಲ್ಲಿ ಕೆಮಾರ್‌ ರೋಚ್‌ ಎರಡು ವಿಕೆಟ್‌ ಪಡೆದರು.
ಅತ್ತ ಗುರಿ ಬೆನ್ನತ್ತಿದ ವಿಂಡೀಸ್‌ ಸಂಪೂರ್ಣ ವಿಫಲತೆ ಕಂಡಿತು. ಸ್ಟುವರ್ಟ್‌ ಬ್ರಾಡ್‌, ಬೆನ್‌ ಸ್ಟೋಕ್ಸ್‌, ಡಾಮ್‌ ಬೆಸ್‌ ಹಾಗೂ ಕ್ರಿಸ್‌ ವೋಕ್ಸ್‌ ನಡೆಸಿದ ಮಾರಕ ದಾಳಿಗೆ ಕುಸಿದ ಪರಿಣಾಮ ವಿಂಡೀಸ್‌ ೭೦.೧ ಓವರ್‌ಗಳಲ್ಲಿ ೧೯೮ ರನ್‌ಗಳಿಗೆ ಸರ್ವಪತನ ಕಂಡಿತು. ಶಮರಾ ಬ್ರೂಕ್ಸ್‌ (೬೨) ಹಾಗೂ ಬ್ಲ್ಯಾಕ್‌ವುಡ್‌ (೫೫) ಹೊರತುಪಡಿಸಿ ಯಾವುದೇ ದಾಂಡಿಗ ಕೂಡ ಕ್ರೀಸ್‌ನಲ್ಲಿ ನೆಲಕಚ್ಚಿ ನಿಲ್ಲುವಲ್ಲಿ ವಿಫಲತೆ ಕಂಡರು. ಇಂಗ್ಲೆಂಡ್‌ ಪರ ಬ್ರಾಡ್‌ ಮೂರು, ಸ್ಟೋಕ್ಸ್‌, ಬೆಸ್‌ ಹಾಗೂ ವೋಕ್ಸ್‌ ತಲಾ ಎರಡು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *