“ದೇಶಾದ್ಯಂತ ಕೋರೋನಾ ಹಂಚಿದ್ದೇ ಮೋದಿ ಸರಕಾರದ ಸಾಧನೆ”

ಮಂಗಳೂರು: “ಜಾಗತಿಕ ಮಟ್ಟದಲ್ಲಿ ಕೋರೋನಾ ಭೀತಿ ಗಂಭೀರ ಹಂತದಲ್ಲಿದ್ದಾಗ ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. WHO ಹಾಗೂ ವೈದ್ಯಕೀಯ ತಜ್ಞರ ಸಲಹೆಗಳನ್ನು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ದೇಶದಲ್ಲಿ ಕೋರೋನಾ ಸೋಂಕಿತರ ಮತ್ತು ಸಾವಿಗೀಡಾದವರ ಸಂಖ್ಯೆ ಹೆಚ್ಚುತ್ತಲಿದೆ. ಪ್ರಸ್ತುತ ಸಂಧರ್ಭದಲ್ಲೂ ಕೇಂದ್ರ ಸರಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ವಹಿಸದೆ, ದೇಶಾದ್ಯಂತ ಕೋರೋನಾ ಹಬ್ಬುವಂತಾಗಿದೆ. ಇದುವೇ ಕಳೆದ 6 ವರ್ಷಗಳಲ್ಲಿ ಮೋದಿ ಸರಕಾರದ ಮಹಾನ್ ಸಾಧನೆಯಾಗಿದೆ” ಎಂದು CPIM ಮಂಗಳೂರು ನಗರ ಮುಖಂಡರಾದ ಸುರೇಶ್ ಬಜಾಲ್ ರವರು ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅವರು CPIM ನೇತ್ರತ್ವದಲ್ಲಿ ಬಜಾಲ್ ಜಲ್ಲಿಗುಡ್ಡೆಯಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುತ್ತಾ ಈ ಮಾತುಗಳನ್ನು ಹೇಳಿದರು. CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, “ಜನಸಾಮಾನ್ಯರಲ್ಲಿ ಇಂದು ಕೋರೋನಾ ಭೀತಿಗಿಂತಲೂ ಮುಖ್ಯವಾಗಿ ಕೋರೋನಾದ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುವುದರ ಬಗ್ಗೆ ಹೆಚ್ಚು ಚಿಂತೆಗೊಳಗಾಗಿದ್ದಾರೆ. ಜನರಿಗೆ ಧೈರ್ಯ ನೀಡಬೇಕಾದ ಸರಕಾರ ಕೋರೋನಾದ ಹೆಸರಿನಲ್ಲೂ ಕೋಟ್ಯಾಂತರ ಹಣವನ್ನು ನುಂಗುವ ಮೂಲಕ ಜನತೆಗೆ ಪಂಗನಾಮ ಹಾಕಲು ಹೊರಟಿದೆ. ಕೋರೋನಾ ಸೋಂಕಿತರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುವ ಮೂಲಕ ಖಾಸಗೀ ಆಸ್ಪತ್ರೆಗಳಿಗೆ ಕಡಿವಾಣ ಹಾಕಬೇಕಾಗಿದೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ CPIM ನಾಯಕರಾದ ಬಶೀರ್ ಜಲ್ಲಿಗುಡ್ಡ, ಮೋಹನ್, ನಾರಾಯಣ,ಮಹಿಳಾ ಮುಖಂಡರಾದ ರೋಹಿಣಿ, ಮಮತಾ,ಗೀತಾ DYFI ನಾಯಕರಾದ ಉಮ್ಮರಬ್ಬ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *