ತಿಬಾರ್ ಕೊಡಮಂದಾಯನಿಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಶಿಬರೂರು ಗ್ರಾಮಸ್ಥರು

ಸುರತ್ಕಲ್ : ತಿಬಾರ್ ಕೊಡಮಂದಾಯನಿಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೊಡಮಂದಾಯನ ಅನಾದಿ ಕಟ್ಟು ಕಟ್ಟಲೆಗೆ ಧಕ್ಕೆ ಉಂಟಾಗಿದೆ ಎಂಬ ಅರೋಪ ಶಿಬರೂರು ಗ್ರಾಮಸ್ಥರಿಂದ ಕೇಳಿಬಂದಿದೆ.

ಶಿಬರೂರು ದೈವಸ್ಥಾನದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ತಿಬಾರ್ ಗುತ್ತಿನಾರ್ ಮತ್ತು ಗ್ರಾಮಸ್ಥರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಟೀಲು ದೇವಾಲಯಕ್ಕೆ ಕೊಡಮಂದಾಯ ದೈವದ ಭೇಟಿಯ ಸಂದರ್ಭದಲ್ಲಿ ದೈವಕ್ಕೆ ಛತ್ರ ಹಿಡಿದು ದೇಗುಲ ಪ್ರವೇಶ ಮಾಡಲು ಅಡ್ಡಿಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಗುತ್ತಿನಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆಯ ಬಗ್ಗೆ ಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಲಾಯಿತು.

ನಾನು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಖಾಸಗಿಯಾಗಿ ದೂರವಾಣಿ ಮೂಲಕ ಮಾತನಾಡಿದ್ದನ್ನು ಹೇಳಿಕೆ ಎಂದು ಪರಿಗಣಿಸಲಾಗಿದೆ. ಅಷ್ಟ ಮಂಗಳ ಪ್ರಶ್ನೆಯಲ್ಲಿ ಛತ್ರ ಹಿಡಿದು ದೈವ ಪ್ರವೇಶಮಾಡಬಾರದು ಎಂದು ಕಂಡು ಬಂದಿದೆ ಎಂದು ದೇಗುಲದ ವತಿಯಿಂದ ತಿಳಿಸಲಾಗಿತ್ತು. ಇದು ಅನಾದಿಯ ಸಂಪ್ರದಾಯ ಎಂದು ಹೇಳಿದ್ದೆ. ಶಿಬರೂರಿನಲ್ಲಿ ಅಷ್ಟಮಂಗಲ ಇಟ್ಟು ವಿಮರ್ಶೆ ಮಾಡುವ ಬಗ್ಗೆ ಮಾತುಕತೆ ಅಗಿತ್ತು. ದೈವದ ಭೇಟಿಯ ಸಂದರ್ಭದಲ್ಲಿ ಈ ಬಗ್ಗೆ ಸ್ಥಳದಲ್ಲೇ ವಿವಾದ ಸೃಷ್ಟಿಸುವುದು ಎರಡೂ ಕ್ಷೇತ್ರದ ಹೆಸರಿಗೂ ಕುಂದು ಎಂದು ಸುಮ್ಮನಾಗಿದ್ದೆ ಎಂದು ಗುತ್ತಿನಾರ್ ಉಮೇಶ ಎನ್ ಶೆಟ್ಟಿ ಹೇಳಿದರು.

ಛತ್ರ, ಸತ್ತಿಗೆ, ಕಡ್ಸಲೆ ಹಿಡಿದು ದೇವಳ ಪ್ರವೇಶ ಮಾಡುವುದು ಅನಾದಿ ಕಾಲದ ಕಟ್ಟು. ನನ್ನ ಎಂಭತ್ತ ನಾಲ್ಕು ವರ್ಷದ ಜೀವಮಾನದಲ್ಲಿ ಇದಕ್ಕೆ ಕುಂದು ಆಗಿಲ್ಲ. ಅಷ್ಟಮಂಗಲ ಪ್ರಶ್ನೆಯಲ್ಲಿ ಅನಾದಿಕಾಲದ ಕಟ್ಟಿಗೆ ಮಾನ್ಯತೆ ನೀಡಲಾಗುತ್ತದೆ. ಕಟೀಲು ದೇಗುಲದಲ್ಲಿ ಇದಕ್ಕೆ ಅಡ್ಡಿಪಡಿಸಿದ್ದರ ಹಿಂದೆ ಯಾವುದೋ ಕುತಂತ್ರ ಇದೆ ಎಂದು ಆಡಳಿತ ಮೊಕ್ತೇಸರ ವಾಸುದೇವ ಶಿಬರಾಯ ಹೇಳಿದರು.

ತಿಬಾರ್‌ನಲ್ಲಿ ಇಟ್ಟ ಪ್ರಶ್ನೆಯಲ್ಲಿ ಕಟೀಲು ದೇಗುಲದ ಪಾಳಿ ಪೂಜಾ ಪದ್ದತಿ ಯೇ ಸರಿಯಲ್ಲ. ದೇವರು ಅಸಮಾಧಾನದಲ್ಲಿದ್ದಾರೆ ಎನ್ನಲಾಗಿದೆ ಅದನ್ನು ಪಾಲಿಸಲಾಗಿದೆಯೇ? ಅಷ್ಟಮಂಗಲ ಪ್ರಶ್ನೆ ಯನ್ನು ಎರಡು ಕ್ಷೇತ್ರ ಜಂಟಿಯಾಗಿ ಇಡಬೇಕು ಇದರ ಖರ್ಚು ಸುಮಾರು ಮೂರು ಲಕ್ಷ ರುಪಾಯಿಯನ್ನು ಶಿಬರೂರಿ‌ನವರೇ ಭರಿಸಬೇಕು ಎಂಬ ಕರಾರು ಹಾಕಲಾಗಿದೆ. ಇದು ಅಷ್ಟಮಂಗಲ ಪ್ರಶ್ನೆ ನಡೆಯಬಾರದು ಎಂಬ ತಂತ್ರ ವಾಗಿದೆ.

ಶಿಬರೂರು ಮತ್ತು ಕಟೀಲಿನ ಸಂಬಂಧ ಉತ್ತಮವಾಗಿ ಮುಂದುವರಿಯಬೇಕು ಎಂದು ಹೇಳುತ್ತಾರೆ. ಅನಾದಿ ಸಂಪ್ರದಾಯ ಮುಂದುವರಿಸುವ ಮೂಲಕ ಅದಕ್ಕೆ ಅವಕಾಶ ಕೊಡಬೇಕು ಎಂಬ ಅಭಿಪ್ರಾಯ ಶಿಬರೂರು ಗ್ರಾಮಸ್ಥರಿಂದ ಕೇಳಿಬಂತು.

ಸಭೆಯಲ್ಲಿ ಆಡಳಿತಮೊಕ್ತೇಸರ ವಾಸುದೇವ ಶಿಬರಾಯ, ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಗಡಿಕಾರ ಸುಧಾಕರ ಶೇಣವ, ಜಿತೇಂದ್ರ ಶೆಟ್ಟಿ ಕೋರಿಯಾರ್ ಗುತ್ತು, ಕಿಶೋರ್ ಶೆಟ್ಟಿ ಪಡುಮನೆ, ಆನಂದ ಶೆಟ್ಟಿ ಕೋರಿಯಾರ್, ಅರ್ಚಕ ಕುಟ್ಟಿ ಮೊಯ್ಲಿ, ಕಾಂತಪ್ಪ ಸಾಲ್ಯಾನ್, ಗಿರೀಶ ಶೆಟ್ಟಿ, ತುಕಾರಾಮ ಶೆಟ್ಟಿ ಪರ್ಲ ಬೈಲು, ಸುಧಾಕರ ಶೆಟ್ಟಿ ಬಾಂಗಾವು, ಸುಧಾಕರ ಶೆಟ್ಟಿ ಶಿಬರೂರು ಗುತ್ತು ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *