`ತಹಸೀಲ್ದಾರ್ ಹತ್ಯೆಯಿಂದ ಸರಕಾರಿ ಸೇವೆಯಲ್ಲಿರುವವರಿಗೆ ಆತಂಕ’

ಗುಬ್ಬಿ:ದುಷ್ಕರ್ಮಿಗಳು ತಹಸೀಲ್ದಾರ್ ಹುದ್ದೆಯಲ್ಲಿದ್ದವರ ಜೀವ ತೆಗೆದಿರುವುದು ನೋಡಿದರೆ ಸಾಮಾನ್ಯ ನೌಕರರ ಜೀವಕ್ಕೆ ಯಾವ ಭದ್ರತೆ ಎಂಬ ಆತಂಕ ಎಲ್ಲಾ ಸರ್ಕಾರಿ ನೌಕರರಲ್ಲಿ ಮೂಡಿದೆ’ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ನಾರಾಯಣ್ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಮಂಗಳವಾರ ಸಾಂಕೇತಿಕ ಧರಣಿ ನಡೆಸಿ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ್ ಹತ್ಯೆ ಖಂಡಿಸಿ ಮಾತನಾಡಿದ ಅವರು ಸ್ಮಶಾನ ಜಮೀನು ಉಳಿಸುವ ನಿಟ್ಟಿನಲ್ಲಿ ವಿವಾದಿತ ಸ್ಥಳದ ಸರ್ವೆ ಕಾರ್ಯಕ್ಕೆ ತೆರಳಿದ್ದ ಕರ್ತವ್ಯನಿರತ ತಾಲ್ಲೂಕು ದಂಡಾಧಿಕಾರಿಗಳ ಮೇಲೆರಗಿದ ಆರೋಪಿ ನಿವೃತ್ತ ಶಿಕ್ಷಕ ಡ್ರಾಗನ್‍ನಿಂದ ಇರಿದು ಕೊಂದಿರುವುದು ಖಂಡನಾರ್ಹ. ಆರೋಪಿಗೆ ಉಗ್ರ ಶಿಕ್ಷೆ ನೀಡುವ ಜತೆಗೆ ಮೃತ ತಹಸೀಲ್ದಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಂದಾಯ, ಭೂಮಾಪನ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ದಿ ಪಂಚಾಯತ್‍ರಾಜ್ ಇಲಾಖೆ ಸೇರಿದಂತೆ ಹಲವು ಇಲಾಖೆ ನೌಕರರು ಸಾರ್ವಜನಿಕರ ನಡುವೆ ಕೆಲಸ ಮಾಡಬೇಕಿದೆ. ಈಗಾಗಲೇ ಹಲ್ಲೆ ದೌರ್ಜನ್ಯ ನಡೆದ ಬಗ್ಗೆ ಸಾಕಷ್ಟ ವರದಿಯಾಗಿದೆ. ಸರ್ಕಾರಿ ಕಾನೂನು ರೀತ್ಯಾ ಕೆಲಸ ಮಾಡುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವವರು ಯಾವ ರೀತಿಯಲ್ಲಾದರೂ ಹಲ್ಲೆ ಅಥವಾ ಕೊಲೆ ಮಾಡುವ ಸಂಭವವಿರುತ್ತದೆ. ಇದಕ್ಕೆ ಬಂಗಾರಪೇಟೆ ಜೀವಂತ ಸಾಕ್ಷ್ಯವಾಗಿದೆ. ನಿಯಮ ಮೀರಿ ಕೆಲಸ ಮಾಡದೇ ದಕ್ಷ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಜೀವ ಕಳೆದುಕೊಳ್ಳುವ ಕೊಡುಗೆ ದೊರೆತರೆ ನೌಕರರು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಸರ್ಕಾರಿ ನೌಕರರ ರಕ್ಷಣೆಗೆ ಸರ್ಕಾರ ಕಠಿಣ ಕಾನೂನು ಅನುಷ್ಠಾನಕ್ಕೆ ತಂದು ಸಂರಕ್ಷಿಸಬೇಕಿದೆ ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಿ.ಮಹೇಶ್ ಮಾತನಾಡಿ ಸರ್ಕಾರಿ ನೌಕರರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿ ಮಾಡಲು ಸರ್ಕಾರ ಸೂಕ್ತ ಕ್ರಮವಹಿಸಿ ನಮ್ಮಗಳ ಜೀವಕ್ಕೆ ಬೆಲೆ ನೀಡಬೇಕು. ಕಾನೂನು ರೀತಿ ಕೆಲಸ ಮಾಡುವ ಸಂದರ್ಭದಲ್ಲಿ ದೌರ್ಜನ್ಯವೆಸಗುವವರ ವಿರುದ್ದ ಕ್ರಮಕ್ಕೆ ಹೊಸ ಕಠಿಣ ಕಾನೂನು ರಚನೆಯಾಗಬೇಕು. ಕರ್ತವ್ಯ ನಿರತರಾಗಿ ಮೃತಪಟ್ಟ ನೌಕರರಿಗೆ ಕೂಡಲೇ ಗರಿಷ್ಠ ಮಟ್ಟದಲ್ಲಿ ಪರಿಹಾರ ಒದಗಿಸಬೇಕು. ಅನುಕಂಪದ ನೇಮಕಾತಿ ಕುಟುಂಬವರ್ಗಕ್ಕೆ ನೀಡುವ ಜತೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಆರ್ಥಿಕ ಸೌಲಭ್ಯವನ್ನು ಕೂಡಲೇ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಕಚೇರಿಯಿಂದ ಕಪ್ಪುಪಟ್ಟಿ ಧರಿಸಿ ಮೌನ ಮರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ನಂತರ ಕೆಲ ಕಾಲ ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಖಜಾಂಚಿ ಕೆ.ಜಿ.ನಾಗರಾಜು, ಮಾಜಿ ಅಧ್ಯಕ್ಷ ಆರ್.ಜಿ.ನಾಗಭೂಷಣ್, ಸದಸ್ಯರಾದ ರಮೇಶ್‍ಕುಮಾರ್, ಕುಮಾರಸ್ವಾಮಿ, ರಾಮಕೃಷ್ಣಪ್ಪ, ಗಂಗಾಧರ್, ಶ್ರೀನಿವಾಸ್, ಸಲಾವುದ್ದೀನ್‍ಖಾನ್ ಇತರರು ಇದ್ದರು.

Leave a Reply

Your email address will not be published. Required fields are marked *