`ಟೋಪಿ ಧರಿಸಿ ಸಂಸತ್‍ಗೆ ಪ್ರವೇಶ ಕೋಮುವಾದ ಅಲ್ವಾ?’ -ಓವೈಸಿ ವಿರುದ್ಧ ಕೊಯ್ನಾ ಟ್ವಿಟರ್ ವಾರ್

ನವದೆಹಲಿ: ಅಯೋಧ್ಯೆ ರಾಮಮಂದಿರದ ಭೂಮಿಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದರ ವಿರುದ್ಧ ಟ್ವೀಟ್ ಮಾಡಿದ್ದ ಸಂಸದ, ಎಐಎಂಐ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಇದೀಗ ಬಾಲಿವುಡ್ ನಟಿ ಕೊಯ್ನಾ ಮಿತ್ರಾ ತಿರುಗೇಟು ನೀಡಿದ್ದಾರೆ. ಪ್ರಧಾನಿ ರಾಮಮಂದಿರದ ಭೂಮಿ ಪೂಜೆಗೆ ಹೋಗುವುದು ಕೋಮವಾದವಾದರೆ ಸಂಸತ್‍ಗೆ ನಮಾಜ್ ಟೋಪಿ ಧರಿಸಿ ಹೋಗೋದು ಕೋಮುವಾದ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿ ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ ಎಂದು ಓವೈಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಕೊಯ್ನಾ ಮಿತ್ರಾ, ಸಂಸದರಾಗಿ ನಮಾಜ್ ಟೋಪಿ ಧರಿಸಿ ಸಂಸತ್ ಪ್ರವೇಶ ಮಾಡುವುದು ಕೋಮುವಾದ ಆಗುತ್ತೆ ಅಲ್ವಾ?. 40 ಸಾವಿರ ದೇವಸ್ಥಾನಗಳನ್ನು ದೋಚಿದರು. ಜೊತೆಗೆ ದೇವಾಲಯಗಳನ್ನು ಧ್ವಂಸಗೊಳಿಸಿದರು. ಮುಂದಿನ ಪೀಳಿಗೆಗೆ ಈ ವಿಷಯಗಳು ತಿಳಿಯಬೇಕಿದೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಇಫ್ತಾರ್ ಕೂಟದಲ್ಲಿ ಭಾಗಿಯಾದ್ರೆ ಕಮ್ಯುನಲ್ ಆಗಲ್ಲ. ಆದ್ರೆ ಭೂಮಿ ಪೂಜೆಗೆ ಭಾಗಿಯಾದ್ರೆ ಆಗುತ್ತಾ? ಎಂದು ಕೇಳಿದ್ದಾರೆ. ನಂತರ ಕೊಯ್ನಾ ಟ್ವೀಟ್‍ಗೆ ಪ್ರತಿಯಾಗಿ ಓವೈಸಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. 1992ರಲ್ಲಿ ಕ್ರಿಮಿನಲ್ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಓವೈಸಿ ಹೇಳಿದ್ದರು.

Leave a Reply

Your email address will not be published. Required fields are marked *