ಟಿಕ್‌ಟಾಕ್‌ನಲ್ಲಿ ಅಸಭ್ಯ ವಿಡಿಯೋ: ಐವರು ಮಹಿಳೆಯರಿಗೆ ಜೈಲು

ಕೈರೋ: ವಿಶ್ವದ ಅತ್ಯಂತ ವಿವಾದಾತ್ಮಕ ಅಪ್ಲಿಕೇಶನ್‌ಗಳಲ್ಲಿ ಟಿಕ್‌ಟಾಕ್‌ ಕೂಡ ಒಂದು ಹೇಳಬಹುದು. ವಿಶ್ವದ ಹಲವು ಕಡೆಗಳಲ್ಲಿ ಈ ಅಪ್ಲಿಕೇಶನ್‌ ವಿಚಾರದಲ್ಲಿ ವಿವಾದ ಸೃಷ್ಟಿಯಾಗುತ್ತಲೇ ಇದೆ. ಇದೀಗ ಈಜಿಪ್ಟ್‌ನಲ್ಲಿ ಅಸಭ್ಯ ವೀಡಿಯೋ ಅಪ್ಲೋಡ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಮಹಿಳೆಯರಿಗೆ ಕೈರೋದ ಆರ್ಥಿಕ ನ್ಯಾಯಾಲಯವು ಜೈಲುಶಿಕ್ಷೆ ವಿಧಿಸಲಾಗಿದೆ. ಈಜಿಪ್ಟ್ ನಲ್ಲಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲೇ ಪ್ರಭಾವಿ ಎನಿಸಿದ ಮಹಿಳೆಯರ ವಿರುದ್ಧ ಕೋರ್ಟ್ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಮಾವಾದ್ ಅಲ್ ಅದಮ್ ಮತ್ತು ಹನೀನ್ ಹೊಸ್ಸಮ್ ಸೇರಿದಂತೆ ಐವರು ಮಹಿಳೆಯರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಒಬ್ಬೊಬ್ಬರಿಗೂ ತಲಾ 3 ಲಕ್ಷ ಈಜಿಪ್ಟ್ ಪೌಂಡ್ ದಂಡವನ್ನು ವಿಧಿಸಿದೆ. ಅಸಭ್ಯ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮಹಿಳೆಯರು ಈಜಿಪ್ಟ್ ಸಮಾಜದ ಮೌಲ್ಯ ಮತ್ತು ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದಾರೆ. ನೈತಿಕ ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಬ್ಬರು ಮಹಿಳೆಯರು ಅಸಭ್ಯ ವಿಡಿಯೋ ಮತ್ತು ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಉಳಿದಂತೆ ಹೆಸರು ಉಲ್ಲೇಖಿಸದ ಮೂವರು ಮಹಿಳೆಯರು ಪುರುಷರ ಜೊತೆಗೆ ಅನುಚಿತವಾಗಿ ಸಂಭಾಷಣೆ ನಡೆಸಿದ ವಿಡಿಯೋ ಕಾಲ್ ಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. 1.3 ಮಿಲಿಯನ್ ಫಾಲೋವರ್ಸ್ ರನ್ನು ಹೊಂದಿರುವ ಹೋಸ್ಸಮ್ ಎಂಬ ಮಹಿಳೆಯು ಹಣವನ್ನು ಸಂಬಾದಿಸುವುದು ಹೇಗೆ ಎನ್ನುವ ಬಗ್ಗೆ 3 ನಿಮಿಷದ ವಿಡಿಯೋ ಅಪ್ ಲೋಡ್ ಮಾಡಿದ್ದರು. ಸಮಾಜವನ್ನು ತಪ್ಪು ಹಾದಿಗೆಳೆಯುವ ಆರೋಪದ ಹಿನ್ನೆಲೆ ಏಪ್ರಿಲ್ ತಿಂಗಳಿನಲ್ಲಿ ಹೋಸ್ಸಮ್ ರನ್ನು ಬಂಧಿಸಿದ್ದರು. ಇನ್ನು, 2 ಮಿಲಿಯನ್ ಫಾಲೋವರ್ಸ್ ರನ್ನು ಹೊಂದಿರುವ ಅಧಮ್ ಈ ಹಿಂದೆ ಅಪಹಾಸ್ಯಕಾರಿ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ಹಿನ್ನೆಲೆ ಕಳೆದ ಮೇ ತಿಂಗಳಿನಲ್ಲಿ ಅಧಮ್ ರನ್ನು ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *