ಚೇಳೂರು ರಂತಡ್ಕ ಸೀಲ್ಡೌನ್, ಊಟಕ್ಕಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು!

ಮಂಗಳೂರು: ನಾಟಿಗೆಂದು ತೆರಳಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಚೇಳೂರು ರಂತಡ್ಕ ಭಾಗದ ಉದ್ದ ಎಂಬಲ್ಲಿನ 15 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಏಳು ದಿನಗಳು ಕಳೆದರೂ ಸೀಲ್ ಡೌನ್ ತೆರೆಯಲು ಯಾರೂ ಮುಂದಾಗುತ್ತಿಲ್ಲ. ಅಲ್ಲದೆ ದಿನಗೂಲಿ ನೌಕರರೇ ಇರುವ ಮನೆಮಂದಿ ಸದ್ಯ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಾಟಿಗೆಂದು ತೆರಳಿದ್ದ 50ರ ಹರೆಯದ ಮಹಿಳೆ ಉರುಳಿಬಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು. ಅದರಂತೆ ನಾಟಿಗೆಂದು ತೆರಳಿದ್ದ ಮಹಿಳೆಯರ 15 ರಷ್ಟು ಮನೆಗಳನ್ನು ಸೀಲ್ ಡೌನ್ ನಡೆಸಲಾಗಿತ್ತು. ಆದರೆ ಸೀಲ್ಡೌನ್ನಲ್ಲಿರುವ ಮನೆಮಾಲೀಕರು ಎಲ್ಲರೂ ದಿನಗೂಲಿ ನೌಕರರು. ಒಂದು ದಿನ ದುಡಿಯದಿದ್ದಲ್ಲಿ ಮನೆಯಲ್ಲಿ ಊಟಕ್ಕೆ ತತ್ವಾರ ಉಂಟಾಗುವಂತಹ ಸ್ಥಿತಿ. ಸೀಲ್ಡೌನ್ ನಡೆಸಿ ಏಳು ದಿನಗಳಾದರೂ ಯಾರೂ ಕೂಡ 15 ಮನೆಗಳತ್ತ ಬರುತ್ತಿಲ್ಲ. ಮಕ್ಕಳಿದ್ದಾರೆ, ಹಿರಿಯರಿದ್ದಾರೆ ಮನೆಯಲ್ಲಿ ತಿನ್ನಲು ಏನಿಲ್ಲ. ಪಂಚಾಯಿತಿ ಸದಸ್ಯರಿಗೆ ಕರೆ ಮಾಡಿದರೂ , ತಮ್ಮ ಅವಧಿ ಮುಗಿದಿದೆ. ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಅನ್ನುವ ಪ್ರತಿಕ್ರಿಯೆ. ಆಶಾ ಕಾರ್ಯಕರ್ತೆಯರಾಗಲಿ, ಗ್ರಾಮಕರಣಿಕರಾಗಲಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಎರಡು ಬಾರಿ ಆರೋಗ್ಯ ಇಲಾಖೆ ದಾದಿಯರು ಬಂದಿದ್ದಾರೆ, ಹೊರತು ಯಾರೂ ಕೂಡ ಭೇಟಿ ಕೊಟ್ಟಿಲ್ಲ. ಜು. 8 ರಿಂದ ಜು 17ರವರೆಗೆ ಸೀಲ್ಡೌನ್ ಬೋರ್ಡನ್ನು ಮನೆಮುಂದೆ ಅಳವಡಿಸಲಾಗಿದೆ. ಆದರೆ ಇದೀಗ ಮತ್ತೆ ಏಳು ದಿನಗಳವರೆಗೆ ಸೀಲ್ ಡೌನ್ ಮುಂದುವರಿಸುವುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ. ಈ ಕ್ರಮದಿಂದಾಗಿ ಹೊಟ್ಟೆಗೆ ಏನೂ ಇಲ್ಲದೆ ಸಾಯುವಂತಹ ಸ್ಥಿತಿ ಎದುರಾಗಿದೆ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು 15 ಮಂದಿಯ ಕಷ್ಟಗಳಿಗೆ ಸ್ಪಂಧಿಸಬೇಕೆಂಬ ಆಗ್ರಹ ಗ್ರಾಮಸ್ಥರಿಂದ ಕೇಳಿಬಂದಿದೆ.