ಗ್ಯಾಂಗ್ ಸ್ಟರ್ ದುಬೆ ಹರ್ಯಾಣದಲ್ಲಿ ಅಡಗಿರುವ ಶಂಕೆ: 25 ಪೊಲೀಸ್ ತಂಡಗಳಿಂದ ಶೋಧ!

ಲಕ್ನೋ: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿರುವ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಹರ್ಯಾಣಾದ ಫರೀದಾಬಾದ್ನ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದು ಅಲ್ಲೇ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸುಳಿವು ಪಡೆದು ಹೋಟೆಲ್ಗೆ ತೆರಳುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ. ಹೋಟೆಲ್ ಸಿಸಿಟಿವಿಯಲ್ಲಿ ಆತ ಬಂದಿರುವುದು ಸೆರೆಯಾಗಿದೆ. ನಿನ್ನೆಯಷ್ಟೇ ಪೊಲೀಸರ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ ವಿಕಾಸ್ ದುಬೆ ಅತ್ಯಾಪ್ತ ಅಮರ್ ದುಬೆಯನ್ನು ಪೊಲೀಸರು ಎನ್ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ. ರೌಡಿ ವಿಕಾಸ್ನನ್ನು ಬಂಧಿಸಲು 25 ಪೊಲೀಸ್ ತಂಡವನ್ನು ರಚಿಸಲಾಗಿದೆ. ಶುಕ್ರವಾರ ನಡೆದ ಘಟನೆ ಬಳಿಕ ಆತ ತಲೆ ಮರೆಸಿಕೊಂಡಿದ್ದ. ಆತನ ಬಗ್ಗೆ ಸುಳಿವು ನೀಡಿದರೆ 2.5 ಲಕ್ಷ ಇನಾಮು ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ 50 ಮಂದಿಯಿಂದ ಪೊಲೀಸ್ ತಂಡ ವಿಕಾಸ್ ದುಬೆಯ ಬಂಧನಕ್ಕೆ ತೆರಳಿದ್ದ ವೇಳೆ ವಿಕಾಸ್ ಮತ್ತಾತನ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿ ಎಂಟು ಮಂದಿಯನ್ನು ಹತ್ಯೆಗೈದಿದ್ದರು.
