ಗುರುಪುರ: ಮಕ್ಕಳಿಬ್ಬರ ಜೀವಂತ ಸಮಾಧಿ ಪ್ರಕರಣ: ಮುಖ್ಯಮಂತ್ರಿ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಮಂಗಳೂರು : ಮಂಗಳೂರಿನ ಗುರುಪುರದ ಬಂಗ್ಲಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಗುರುಪುರ ಮಠದಗುಡ್ಡೆ ಮೂಳೂರು ಸೈಟ್‍ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭಾರೀ ಗುಡ್ಡೆ ಕುಸಿತದಿಂದ ಮನೆಗಳೆರಡು ಸಂಪೂರ್ಣ ಮಣ್ಣಿನಿಂದ ಮುಚ್ಚಲ್ಪಟ್ಟು, ಮನೆಯೊಳಗಿದ್ದ ಮಕ್ಕಳಿಬ್ಬರು ಜೀವಂತ ಸಮಾಧಿಯಾದ ದಾರುಣ ಘಟನೆ ಸಂಭವಿಸಿತು. ಸುಮಾರು ನಾಲ್ಕು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆಯಲಾಯಿತು.
ಮುಹಮ್ಮದ್ ಯಾನೆ ಮೋನು ಹಾಗೂ ಅಶ್ರಫ್ ಎಂಬವರ ಮನೆಯ ಮೇಲೆ ಗುಡ್ಡೆಯ ಮಣ್ಣು ಜರಿದು ಮನೆ ನೆಲಸಮವಾಗಿದೆ. ರಜೆ ನಿಮಿತ್ತ ಮೋನು ಅವರ ಮನೆಗೆ ಗುರುಪುರ ತಾರಿಕರಿಯದ ಏಳೆಂಟು ಮಂದಿ ಸಂಬಂಧಿಕರು ಬಂದಿದ್ದರು. ಮಧ್ಯಾಹ್ನ 1.10ರ ಸುಮಾರಿಗೆ ಎಲ್ಲರೂ ಮನೆಯಂಗಳದಲ್ಲಿ ಇದ್ದು, ಮಳೆ ನೀರು ಸರಾಗವಾಗಿ ಹರಿಯಲು ತೋಡು ರಚಿಸುವ ಕುರಿತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಮನೆಯ ಹಿಂದಿನ ಗುಡ್ಡ ಜರಿಯಯಲಾರಂಭಿಸಿತು.
ಮನೆಯವರು ಭಯಭೀತರಾಗಿ ಕೆಳಗಡೆ ಓಡಿ ಹೋಗಿದ್ದರೆ, ಮೋನು ಎಂಬವರ ಮನೆಯೊಳಗೆ ಮಲಗಿದ್ದ ಸಫ್ವಾನ್(16) ಮತ್ತು ಸಹಲಾ(10) ಎಂಬವರು ದುರದೃಷ್ಟವಶಾತ್ ಮನೆ ಮೇಲೆ ಬಿದ್ದ ಮಣ್ಣಿನಡಿಯಲ್ಲಿ ಸಿಲುಕಿದರು. ಮೃತ ಅಣ್ಣ, ತಂಗಿ ತಾರಿಕರಿಯದ ಶರೀಫ್ ಎಂಬವರ ಮಕ್ಕಳಾಗಿದ್ದಾರೆ. ಮೋನು ಮತ್ತು ಶರೀಫ್ ಅತಿ ಬಡ ಕುಟುಂಬವರಾಗಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಮನೆ ಮೇಲೆ ಗುಡ್ಡದ ಮಣ್ಣು ಜರಿದು ಬಿದ್ದಿದ್ದು, ಮನೆಯವರು ಅಪಾಯವರಿತು ತಕ್ಷಣ ಬೇರೆಡೆಗೆ ಹೋಗಿದ್ದರು. ಈ ವೇಳೆ ಒಂದಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಗುಡ್ಡ ಜರಿದ ಪ್ರದೇಶದಲ್ಲಿರುವ ಇನ್ನೆರಡು ಮನೆಗಳು ಇನ್ನೇನು ಕುಸಿಯುವ ಹಂತದಲ್ಲಿದ್ದು, 60 ಮನೆಗಳಿಗೆ ಅಪಾಯ ಎದುರಾಗಿದೆ. ಸ್ಥಳದಲ್ಲಿ ಗುಡ್ಡೆ ಜರಿಯುತ್ತಿದ್ದರೂ ಅಪಾಯ ಲೆಕ್ಕಿಸದೆ ಪೊಲೀಸ್, ಎನ್‍ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಯುವಕರ ತಂಡ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿತು. ಐದಾರು ಜೆಸಿಬಿಗಳು, ಹಿಟಾಚಿ, ಲಾರಿ ಸಿಬ್ಬಂದಿಯು ಕಡಿದಾದ ಗುಡ್ಡದ ಮೇಲ್ಗಡೆ ನಿರಂತರ ಅಪಾಯಕಾರಿ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ಮಣ್ಣಿನಡಿಯಿಂದ ಹೊರತೆಗೆದರು. ಇಬ್ಬರ ಶವವೂ ಒಂದೇ ಸ್ಥಳದಲ್ಲಿ ಪತ್ತೆಯಾಗಿದೆ.
ವಿದ್ಯುತ್ ಕಂಬಗಳು ಮತ್ತು ಹತ್ತಾರು ಮರಗಳು ರಸ್ತೆಗೆ ಬಿದ್ದಿದ್ದು, ಸುಗಮ ಕಾರ್ಯಾಚರಣೆಗಾಗಿ ಗುರುಪುರ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಯಿತು. ಸ್ಥಳದಲ್ಲಿದ್ದ ಒಂದು ಟಿಪ್ಪರ್, ರಿಕ್ಷಾ, ಮೂರು ದ್ವಿಚಕ್ರ ವಾಹನ ಮಣ್ಣಿನಡಿಗೆ ಬಿದ್ದು ನುಜ್ಜುಗುಜ್ಜಾಗಿವೆ. ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾಗಿ ಮಠದಗುಡ್ಡೆ, ಅಣೆಬಳಿ ವಸತಿ ಪ್ರದೇಶದ ಅಲ್ಲಲ್ಲಿ ಗುಡ್ಡೆ ಜರಿದಿದ್ದು, ಬಂಡೆಗಳು ಉರುಳಿವೆ.

ಮನೆಗಳ ಸ್ಥಳಾಂತರ :
ಗುಡ್ಡೆ ಜರಿಯುತ್ತಿರುವ ಪ್ರದೇಶದಲ್ಲಿರುವ ಸುಮಾರು 60 ಮನೆಯವರನ್ನು ಬೇರೆಡೆಗೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳಿಗೆ ಸ್ಥಳಾಂತರಿಸಬೇಕು ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಇಲ್ಲಿನ ಕೆಲವರು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಉಳಿದ ಕುಟುಂಬಗಳನ್ನು ಗುರುಪುರ ಹೈಸ್ಕೂಲ್, ಪ್ರಾಥಮಿಕ ಶಾಲೆ, ಬಂಗ್ಲೆಗುಡ್ಡೆ ಹಾಸ್ಟೆಲ್, ಪಂಚಾಯತ್ ಸಭಾಗೃಹ, ಗುರುಕಂಬ್ಳ ಶಾಲೆಗಳ ಕಟ್ಟಡಗಳಿಗೆ ಸ್ಥಳಾಂತರಿಸುವ ಕುರಿತು ಗುರುಪುರ ಗ್ರಾಮ ಪಂಚಾಯತ್ ಪಿಡಿಒ ಅಬೂಬಕ್ಕರ್, ತಹಶೀಲ್ದಾರ್, ಉಪ-ತಹಶೀಲ್ದಾರ್, ಪಂಚಾಯತ್ ಸದಸ್ಯರೊಂದಿಗೆ ಸಮಾಲೋಚಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಹಾಯಕ ಆಯುಕ್ತ, ಎಸಿಪಿ ಬೆಳ್ಳಿಯಪ್ಪ, ತಹಶೀಲ್ದಾರ್ ಗುರುಪ್ರಸಾದ್, ಬಜ್ಪೆ ವೃತ್ತ ನಿರೀಕ್ಷಕ ಕೆ ಆರ್ ನಾಯ್ಕ್, ತಾಪಂ ಸಿಇಒ ಸದಾನಂದ ಸಫಲಿಗ, ಮಂಗಳೂರು ಶಾಸಕ ಯು ಟಿ ಖಾದರ್, ಸ್ಥಳೀಯ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳಾಂತರಕ್ಕೆ ಸೂಚನೆ :ಸುಮಾರು 20 ದಿನಗಳ ಹಿಂದೆ ಇಲ್ಲೇ ಆವರಣ ಗೋಡೆ ಜರಿದು ನಾರಾಯಣ ನಾಯ್ಕ್ ಎಂಬವರು ಮೃತಪಟ್ಟ ಸಂದರ್ಭದಲ್ಲೇ ಸ್ಥಳಕ್ಕೆ ಭೇಟಿ ನೀಡಿ, ಮಳೆಗಾಲದಲ್ಲಿ ಅಪಾಯ ಸಾಧ್ಯತೆ ಇರುವ ಇಲ್ಲಿನ ಕೆಲವು ಮನೆಯವರನ್ನು ಬೇರಡೆಗೆ ಸ್ಥಳಾಂತರಿಸಲು ಸೂಚನೆ ನೀಡಿದ್ದೇವೆ. ಕೆಲವು ಕಡೆ ಗುಡ್ಡದ ನೀರು ಸರಾಗವಾಗಿ ಹರಿಯುವಲ್ಲಿ ತಡೆಯಾಗಿದ್ದು, ಗುಡ್ದದಲ್ಲೇ ನೀರು ಇಂಗಿ ಗುಡ್ಡದ ಮಣ್ಣು ಸಡಿಲಗೊಂಡಿದೆ. ಪರಿಣಾಮ ಗುಡ್ಡ ಕುಸಿತ ಸಂಭವಿಸಿದೆ. ಇವರನ್ನೆಲ್ಲ ಮಳೆಗಾಲದ ಸುಮಾರು ಎರಡು ತಿಂಗಳು ಬೇರಡೆಗೆ ಸ್ಥಳಾಂತರಿಸುವ ಮುನ್ನವೇ ಈದೊಂದು ದುರಂತ ಸಂಭವಿಸಿತು ಎಂದು ಗ್ರಾಮ ಪಂಚಾಯತ್ ಮೂಲವೊಂದು ತಿಳಿಸಿದೆ.

ಗುರುಪುರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಠದಗುಡ್ಡೆ ಮೂಳೂರು ಸೈಟ್ ಹಾಗೂ ಅಣೆಬಳಿಯ 16 ಮನೆಗಳನ್ನು ಬೇರಡೆಗೆ ಸ್ಥಳಾಂತರಿಸುವಂತೆ ವರದಿ ನೀಡಿದ್ದೆ. ಆದರೆ ಈವರೆಗೆ ಈ ವರದಿ ಕಾರ್ಯಗತಗೊಂಡಿಲ್ಲ ಎಂದು ತಾಪಂ ಸಿಇಒ ಸದಾನಂದ ಅವರು ತಿಳಿಸಿದರು.
ದುರಂತ ಸಂಭವಿಸಿದ ಸ್ಥಳದ ಮೇಲಿನ ಗುಡ್ಡದಲ್ಲಿ ಹಾಗೂ ಸುತ್ತಲ ಗುಡ್ಡ ಪ್ರದೇಶಗಳಲ್ಲಿ ನೂರಾರು ಮಂದಿ ಕಾರ್ಯಾಚರಣೆ ವೀಕ್ಷಿಸುತ್ತಿದ್ದರು. ಪರಿಸರದ ಎರಡು ರಸ್ತೆ, ಪಂಚಾಯತ್ ರಸ್ತೆಗಳಲ್ಲಿ ಸಾವಿರಾರು ವಾಹನಗಳು ತುಂಬಿದ್ದವು. ಮೃತದೇಹಗಳನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆ ಸಾಗಿಸಲಾಗಿದೆ.