ಗುಬ್ಬಿ: ಮರ ಕಡಿಯುವುದರ ವಿರುದ್ಧ ದಿಢೀರ್ ಪ್ರತಿಭಟನೆ

ಗುಬ್ಬಿ: ತಾಲೂಕು ನಿಟ್ಟೂರು ಹೋಬಳಿ ಸೋಪನಹಳ್ಳಿ ಗೇಟ್ ಬಳಿ ಬಾವಲಿ ವಾಸಿಸುವ ಬೃಹತ್‍ ಮರಗಳನ್ನು ಕಡಿಯಲು ಮುಂದಾಗಿರುವ ಬಗ್ಗೆ ವಿರೋಧಿಸಿ ಮಂಗಳವಾರ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದರು. ಸಾವಿರಾರು ಬಾವಲಿ ಹಕ್ಕಿಗಳ ವಾಸಸ್ಥಾನವಾದ ಎರಡು ಬೃಹತ್ ಮರವನ್ನು ಕಡಿಯದಂತೆ ಆದೇಶವಿದ್ದರೂ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು ಅರಣ್ಯ ಇಲಾಖೆಯ ಶಾಮೀಲಿನಲ್ಲಿ ಮರದ ಕೊಂಬೆಗಳನ್ನು ಕಡಿದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಮುಖಂಡರು ಮರದ ಬುಡದಲ್ಲೇ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಗೇಟ್ ಬಳಿ ನಡೆದಿದೆ.
ನೂರಾರು ವರ್ಷಗಳಿಂದ ಬಾವಲಿಹಕ್ಕಿಗಳು ವಾಸವಿದ್ದ ಸಂಪ್ರದಾಯಕ ತಳಿಯ ದೊಡ್ಡ ಆಲದಮರ ಹಾಗೂ ಹಿಪ್ಪೇಮರವು ಹೆದ್ದಾರಿ ಅಗಲೀರಣಕ್ಕೆ ಒಳಪಟ್ಟಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ನಡುಮಧ್ಯೆ ಬರುವ ಈ ಎರಡು ಮರಗಳು ಕಡಿಯಲು ಎರಡು ವರ್ಷಗಳ ಹಿಂದೆ ಅಡ್ಡಿಪಡಿಸಿದ್ದ ಸ್ಥಳೀಯರು ಈ ಮರಗಳನ್ನು ಉಳಿಸಿಕೊಡಲು ಮನವಿ ಮಾಡಿದ್ದರು. ಹೀರೇಹಕ್ಕಿ ಮರಗಳು ದೇವರಿಗೆ ಸಮಾನ ಎಂದು ನಂಬಿರುವ ಇಲ್ಲಿನ ಗ್ರಾಮಸ್ಥರು ಮರಗಳಿಗೆ ಪೂಜೆ ಪುನಸ್ಕಾರ ಮಾಡಿದ್ದ ನಿದರ್ಶನವಿದೆ. ಇಂತಹ ಮರಗಳು ಸುಮಾರು 5 ಸಾವಿರ ಬಾವಲಿ ಹಕ್ಕಿಗಳಿಗೆ ವಾಸಸ್ಥಳವಾಗಿದೆ. ಮನವಿ ಪುರಸ್ಕರಿಸಿದ ಅರಣ್ಯ ಇಲಾಖೆ ಮರಗಳನ್ನು ಉಳಿಸುವ ಭರವಸೆ ನೀಡಿ ಆದೇಶವನ್ನು ಹೊರಡಿಸಿತ್ತು. ಆದರೆ ಈ ಆದೇಶವನ್ನೇ ಉಲ್ಲಂಘನೆ ಮಾಡಿದ ಹೆದ್ದಾರಿ ಗುತ್ತಿಗೆದಾರರ ತಡರಾತ್ರಿ ಮರಗಳನ್ನು ಕಡಿಯಲು ಮುಂದಾಗಿರುವುದು ಹೀನ ಕೃತ್ಯ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಕಿಡಿಕಾರಿದರು.
ಮಲ್ಲಸಂದ್ರದಿಂದ ಅರಸೀಕೆರೆ ಮಾರ್ಗವನ್ನು ಅಗಲೀಕರಣ ಮಾಡಿ ನಾಲ್ಕು ರಸ್ತೆ ನಿರ್ಮಾಣಕ್ಕೆ ಮುಂದಾದ ಹೆದ್ದಾರಿ ಪ್ರಾಧಿಕಾರ ಮುಂದಾದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿನ 6535 ಮರಗಳ ಕಡಿಯಲು ಅನುಮತಿ ನೀಡಿದ ಅರಣ್ಯ ಇಲಾಖೆ ಬಾವಲಿ ಪಕ್ಷಿಗಳಿರುವ ಮರದ ಸಂಖ್ಯೆ 564 ಮತ್ತು 566 ಎರಡು ಮರಗಳನ್ನು ಉಳಿಸಿ ಮಿಕ್ಕಿದ ಮರಗಳನ್ನು ಕಡಿಯಲು ಆದೇಶ ನೀಡಿದ್ದಾರೆ. ಈ ಆದೇಶವನ್ನೇ ಉಲ್ಲಂಘಿಸಿದ ಗುತ್ತಿಗೆದಾರ ರಾತ್ರಿ ವೇಳೆ ಆಧುನಿಕ ಯಂತ್ರ ಬಳಸಿ ಕಟಾವು ಮಾಡಲು ಮುಂದಾಗಿ ಆಲದಮರಗಳ ಎರಡು ಬೃಹತ್‍ಕೊಂಬೆಗಳನ್ನು ಧರೆಗುರುಳಿಸಿದ್ದಾರೆ. ರಾತ್ರಿ ವೇಳೆ ಆಹಾರ ಹುಡುಕಿ ಹೊರಟು ಮರಳ ತನ್ನ ಸ್ಥಾನಕ್ಕೆ ಬಂದ ಬಾವಲಿ ಹಕ್ಕಿಗಳ ಹಿಂಡು ಹಗಲಿನಲ್ಲಿ ಆಕಾಶದಲ್ಲಿ ಸುತ್ತುತ್ತಾ ಪರದಾಡಿದ್ದು ಸ್ಥಳೀಯರಲ್ಲಿ ಆಕ್ರೋಶ ತಂದಿದೆ. ಅಪರೂಪದ ಹಕ್ಕಿಗಳ ಸಂತತಿ ನಾಶ ಮಾಡಲು ಮುಂದಾದ ಗುತ್ತಿಗೆದಾರನ ವಿರುದ್ದ ಕೇಸು ದಾಖಲಿಸಬೇಕು. ಹಾಗೂ ಈ ಎರಡು ಮರಗಳನ್ನು ಉಳಿಸಿ ರಸ್ತೆ ಅಗಲೀಕರಣ ಮಾಡಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಆಗ್ರಹಿಸಿದರು
ಮರಗಳ ಮಾರಣಹೋಮ ಮಾಡುವಲ್ಲಿ ಆತುರರಾಗುವ ಹೆದ್ದಾರಿ ರಸ್ತೆ ಗುತ್ತಿಗೆದಾರರು ಕ್ಷಣಾರ್ಧದಲ್ಲಿ ಮರಗಳನ್ನು ಧರೆಗುರುಳಿಸುತ್ತಾರೆ. ಆದರೆ ಅದರ ನೂರಾರು ವರ್ಷಗಳ ಇತಿಹಾಸ ಗುರುತು ಸಿಗದಂತೆ ಮಾಡುವ ಅಭಿವೃದ್ದಿ ಕೆಲಸದಿಂದ ಪರಿಸರ ನಾಶವಾಗಲಿದೆ. ಇಡೀ ತಾಲ್ಲೂಕಿನಲ್ಲಿ ಅಪರೂಪದ ಬಾವಲಿಹಕ್ಕಿಗಳ ಸಂತತಿ ಸಾವಿರಾರು ಸಂಖ್ಯೆಯಲ್ಲಿ ಒಂದಡೆ ಇರುವ ಮರಗಳನ್ನು ಉಳಿಸುವಲ್ಲಿ ಅರಣ್ಯ ಇಲಾಖೆ ಕೂಡಾ ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸ ಎನಿಸಿದೆ. ಸೋಪನಹಳ್ಳಿ ಮರಗಳೆಂದರೆ ಬಾವಲಿಗಳ ಮರ ಎಂದೇ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದೆ. ಅಂತಹ ಮರದ ಒಂದು ಭಾಗವನ್ನು ಸಲ್ಲದ ಕಾರಣ ನೀಡಿ ಕಡಿದಿರುವ ಗುತ್ತಿಗೆದಾರರ ವಿರುದ್ದ ಕ್ರಮವಹಿಸುವ ಜತೆಗೆ ಅರಣ್ಯ ಇಲಾಖೆ ಬೇಜವಾಬ್ದಾರಿತನಕ್ಕೆ ಜಿಲ್ಲಾಡಳಿತ ಕ್ರಮವಹಿಸಬೇಕು. ಈ ಜತೆಗೆ ನೂರು ಜೇನುಗೂಡು ಇದ್ದ ಮತ್ತೊಂದು ಮರವನ್ನು ಕಡಿದು ತಮ್ಮ ಕ್ರೌರ್ಯ ಮೆರದಿದ್ದಾರೆ. ಜಿಲ್ಲಾ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಬಿಜೆಪಿ ಮಾಜಿ ತಾಲ್ಲೂಕು ಅಧ್ಯಕ್ಷ ಎಚ್.ಟಿ.ಭೈರಪ್ಪ ಒತ್ತಾಯಿಸಿದರು.
ಮರದ ಬುಡದಲ್ಲಿ ಎರಡು ತಾಸು ಧರಣಿ ನಡೆಸಿದ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ರವಿ, ಪಿಎಸ್‍ಐ ಜ್ಞಾನಮೂರ್ತಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ಅಮೃತ್ ಧರಣಿ ನಿರತ ಪರಿಸರ ಪ್ರೇಮಿಗಳೊಂದಿಗೆ ಚರ್ಚಿಸಿದರು. ನೂರಾರು ವರ್ಷಗಳ ಇತಿಹಾಸದ ಈ ಎರಡು ಬೃಹತ್‍ಮರಗಳು ಅಪರೂಪದ ಪಕ್ಷಿ ಸಂಕುಲ ಬಾವಲಿಹಕ್ಕಿಗಳನ್ನು ಸಾಕಿ ಸಲಹಿದೆ. ಇಂತಹ ಮರಗಳ ಕಡಿಯದಂತೆ ಉಳಿಸಿ ರಸ್ತೆ ಕೆಲಸ ಮಾಡಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಮನದಟ್ಟು ಮಾಡುವ ಭರವಸೆ ಹಾಗೂ ಏಕಾಏಕಿ ಮರದ ಕೊಂಬೆ ಕಡಿದ ಪ್ರಕರಣ ದಾಖಲು ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಸಿದ್ದರಾಮಯ್ಯ, ಯತೀಶ್‍ಕುಮಾರ್, ಉಮೇಶ್, ಕೆ.ಆರ್.ಗುರು, ನಂದೀಶ್, ರಮೇಶ್, ಗುರುಚನ್ನಬಸವಯ್ಯ, ಸಾಗರನಹಳ್ಳಿ ಜಗದೀಶ್, ಚನ್ನನಂಜಪ್ಪ, ಜಗದೀಶ್ ಇತರರು ಇದ್ದರು.

Leave a Reply

Your email address will not be published. Required fields are marked *