ಗಂಡನಿಗೆ ಡೈವೋರ್ಸ್ ಕೊಟ್ಟು ಪ್ರೇಮಿಗಾಗಿ ಮತಾಂತರಗೊಂಡು ಬೀದಿಗೆ ಬಿದ್ದವಳ ದುರಂತ ಕಥೆ!

ಮಂಗಳೂರು: ಪ್ರೀತಿಯ ನಾಟಕವಾಡಿ ಮೊದಲ ಪತಿಯಿಂದ ವಿಚ್ಛೇದನ ಕೊಡುವಂತೆ ಮಾಡಿ ಮತಾಂತರದ ಬಳಿಕ ಮಹಿಳೆಯನ್ನು ಮದುವೆಯಾಗಿದ್ದ ಕಟ್ಟೆಕ್ಕಾರ್‍ನ ಇಬ್ರಾಹಿಂ ಖಲೀಲ್ ಮೂರು ವರ್ಷಗಳ ಬಳಿಕ ತನ್ನನ್ನೇ ನಂಬಿಕೊಂಡಿದ್ದ ಪತ್ನಿಯನ್ನು ಕೈಕೊಡುವ ಹಂತದಲ್ಲಿದ್ದಾನೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಮಹಿಳೆ, ಖಲೀಲ್‍ನ ಊರಿನಲ್ಲೇ ಠಿಕಾಣಿ ಹೂಡಿ ಹೋರಾಟ ನಡೆಸುತ್ತಿದ್ದು, ಇವರಿಗೆ ಮಹಿಳಾ ಅಯೋಗ ಮತ್ತು ಪೊಲೀಸ್ ಇಲಾಖೆ ಬೆಂಬಲಕ್ಕೆ ನಿಂತಿರುವುದು ಆನೆಬಲ ನೀಡಿದೆ. ಈ ವಿಚಾರದಲ್ಲಿ ಮುಸ್ಲಿಂ ಸಮುದಾಯ ಧ್ವನಿ ಎತ್ತಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ. ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಆಸಿಯಾ ಅವರು ಪತ್ರಿಕೆಗೆ ನೀಡಿದ್ದಾರೆ.
ಮಹಿಳೆ ಮೂಲತಃ ಕೇರಳದ ಕಣ್ಣೂರಿನವರು. ಇಬ್ರಾಹಿಂ ಖಲೀಲ್‍ಗಿಂತ ವಯಸ್ಸಿನಲ್ಲಿ ದೊಡ್ಡವರು. ಈಕೆ ತನ್ನ ಹೆತ್ತವರ ಏಕೈಕ ಪುತ್ರಿಯಾಗಿದ್ದು, ಮದುವೆಯ ಬಳಿಕ ಬೆಂಗಳೂರಿನಲ್ಲಿ ಗಂಡ ಜೊತೆ ವಾಸವಿದ್ದರು. ಮಹಿಳೆಯೂ ಬೆಂಗಳೂರಿನಲ್ಲೇ ಫ್ರೀಲೆನ್ಸ್ ಕೆಲಸದಲ್ಲಿದ್ದ ಕಾರಣ ಈಕೆಯ ಹೆತ್ತವರೂ ಬೆಂಗಳೂರಿಗೆ ಬಂದು ಮೂರುವರೆ ಕೋಟಿ ತೂಗುವ ಮನೆಯನ್ನು ಖರೀದಿಸಿದ್ದರು. ಸುಂದರವಾದ ದಾಂಪತ್ಯದಲ್ಲಿ ಕಟ್ಟೆಕ್ಕಾರ್ ಖಲೀಲ್ ಬಿರುಗಾಳಿ ಎಬ್ಬಿಸಿ, ಮಹಿಳೆಯನ್ನು ತನ್ನತ್ತ ಸೆಳೆದು ಇದೀಗ ಕೈಕೊಡುವತ್ತ ಹೆಜ್ಜೆ ಇಡುತ್ತಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅವಮಾನ ಎನ್ನುವ ಆಕ್ರೋಶ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

ಆಸಿಯಾ ಹೇಳಿದ ಲವ್-ಮ್ಯಾರೇಜ್ ಸ್ಟೋರಿ:
ಫುಟ್‍ವೇರ್ ಖರೀದಿಗಾಗಿ ಆಗಾಗ ಬೆಂಗಳೂರಿಗೆ ಹೋಗುತ್ತಿದ್ದ ಖಲೀಲ್‍ಗೆ ಮಹಿಳೆಯ ಪರಿಚಯವಾಗಿದ್ದು, ಬಳಿಕ ಪ್ರೇಮಕ್ಕೆ ತಿರುಗಿತ್ತು. ಇದು ತಂದೆಗೆ ಗೊತ್ತಾಗಿ ರಂಪಾಟವೂ ನಡೆದಿತ್ತು. ಪತಿ ಇರುವುದರಿಂದ ಮದುವೆಯಾಗುವುದು ಅಸಾಧ್ಯ ಎಂದು ಖಲೀಲ್, ಮಹಿಳೆಗೆ ತಿಳಿಸಿದ್ದರಿಂದ ಆಕೆ ವಿಚ್ಛೇದನ ಪಡೆದಿದ್ದೆ. ಆದರೆ ಮದುವೆಗೆ ತಂದೆ ಅಡ್ಡಿಯಾಗಿದ್ದರು. 2016, ಆಗಸ್ಟ್‍ನಲ್ಲಿ ತಂದೆ ತೀರಿಹೋದರು. ಈ ಸಂದರ್ಭ ಮತ್ತೆ ಮದುವೆಯ ಪ್ರಸ್ತಾಪ ಇಟ್ಟ ಖಲೀಲ್, ಮದುವೆಯಾಗಬೇಕಾದರೆ ಮತಾಂತರ ಅನಿವಾರ್ಯ ಎಂದಿದ್ದರಿಂದ ಜನವರಿ 2017ರಲ್ಲಿ ತಾನು ಮತಾಂತರಗೊಂಡು ಹೆಸರನ್ನು ಆಸಿಯಾ ಎಂದು ಬದಲಾಯಿಸಿಕೊಂಡೆ ಎಂದು ತಿಳಿಸಿದ್ದಾರೆ.
2017, ಜುಲೈಯಲ್ಲಿ ಬೆಂಗಳೂರಿನ ಪೀಣ್ಯ ಹೆಗ್ಗನಹಳ್ಳಿ ಮಸ್ಜಿದುಲ್ ಖೈರ್‍ನಲ್ಲಿ ಅಧ್ಯಕ್ಷ ಜಲೀಲ್, ಕಾರ್ಯದರ್ಶಿ ಬಶೀರ್, ಖತೀಬ್ ಬಶೀರ್ ಸಾಬಿ ಹಾಗೂ ಇನ್ನೊರ್ವನ ಸಮ್ಮುಖದಲ್ಲಿ ಖಲೀಲ್‍ನ ನಿಖಾಹ್ ನೆರವೇರಿ ನನಗೆ ಮಹರನ್ನೂ ಕೊಟ್ಟರು. (ಅನಫಿಗಳು ನಿಕಾಹ್ ಸಂದರ್ಭ ಫೊಟೋ ತೆಗೆಯಲು ಅವಕಾಶ ನೀಡುವುದು ಅಪರೂಪ, ಇದರಿಂದಾಗಿ ನಿಕಾಹ್ ಫೊಟೋ ಯಾರೂ ತೆಗೆದಿಲ್ಲ ಎನ್ನಲಾಗಿದೆ. ಅಲ್ಲದೆ ಇದು ಹುಡುಗ ಮತ್ತು ಹುಡುಗಿಯ ಮನೆಯವರಿಗೆ ತಿಳಿಯದೆ ಆದ ನಿಕಾಹ್ ಆಗಿದ್ದರಿಂದ ಇಲ್ಲಿ ಅಧಿಕೃತ ದಾಖಲೆಗಳು ನಿರೀಕ್ಷಿಸುವಂತಿಲ್ಲ). ಆ ಸಂದರ್ಭ ಮುಂದಿನ ಜೀವನ ಹೀಗಾಗುತ್ತದೆ ಎಂದೂ, ಇಸ್ಲಾಮಿನ ಸಂಪ್ರದಾಯದ ಬಗ್ಗೆಯೂ ನನಗೆ ಗೊತ್ತಿರಲಿಲ್ಲ.
ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ಖಾಲಿಯಿದ್ದ ಫ್ಲ್ಯಾಟ್‍ನಲ್ಲಿ ವಾಸವಿದ್ದು ಖಲೀಲ್ ಮೊದಲಿನಂತೆಯೇ ಖರೀದಿಗೆ ಬಂದಾಗ ಅಲ್ಲೇ ಉಳಿದುಕೊಳ್ಳುತ್ತಿದ್ದ. ಗಪ್‍ಚುಪ್ ಮದುವೆಯ ಕಹಾನಿ 2019ರವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸಾಗಿತ್ತು. ಈ ನಡುವೆ ಖಲೀಲ್‍ಗೆ ಮದುವೆ ಮಾಡಲು ಮನೆಯಲ್ಲಿ ಪ್ರಯತ್ನಿಸಿದರೂ ಆತ ಒಪ್ಪುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಆತನ ಅತ್ತಿಗೆ, ನವೆಂಬರ್‍ನಲ್ಲಿ ತನಗೆ ಕರೆ ಮಾಡಿ ಮಾತನಾಡಿದಾಗ, ನಾವಿಬ್ಬರು ನಿಕಾಹ್ ಆಗಿರುವ ಬಗ್ಗೆ ಮಾಹಿತಿ ತಿಳಿಸಿದಾಗ ಖಲೀಲ್‍ನ ಹೆತ್ತವರು, ಅಣ್ಣ ಮತ್ತು ಅತ್ತಿಗೆ ಶಾಕ್ ಆಗುತ್ತಾರೆ. ಈ ಬಗ್ಗೆ ಹೆಗ್ಗನಹಳ್ಳಿ ಮಸೀದಿ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಅವರೂ ಖಲೀಲ್‍ಗೆ ನಿಖಾಹ್ ಮಾಡಿರುವುದನ್ನು ತಿಳಿಸಿ, ಹರಾಂ ಆಗಿದ್ದನ್ನು ಹಲಾಲ್ ಮಾಡಿದ್ದೇವೆ ಎಂದು ತಿಳಿಸಿದ ಆಸಿಯಾ, ನಿಕಾಹ್ ಹಲಾಲ್ ಆದ ಬಳಿಕ ಈಗೇಕೆ ಹೀಗೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕ್ರಮೇಣ ಈ ವಿಚಾರ ತನ್ನ ಮನೆಯಲ್ಲೂ ತಿಳಿದು ರಂಪಾಟವೇ ನಡೆದು ಆಸ್ತಿಯಲ್ಲಿ ಏನೂ ಕೊಡುವುದಿಲ್ಲ ಎಂದಾಗ, ಖಲೀಲ್ ಬಳಿ ಮಾತನಾಡಿ ಅವರ ಮೇಲಿನ ಧೈರ್ಯದಿಂದ ಆಸ್ತಿ ಬೇಡ ಎಂದು ಬರೆದುಕೊಟ್ಟ ಅಲ್ಲಿಂದ ಹೊರಟೆ. ಈ ಸಂದರ್ಭ ಖಲೀಲ್‍ನ ಸಹೋದರ ತನ್ನಲ್ಲಿ ಮಾತನಾಡಿ, ಇಬ್ಬರ ವಾಸಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡುತ್ತಾರೆ. ಇದೆಲ್ಲಾ ನಡೆದ ಬಳಿಕ ಕೆಲವು ದಿನ ಚಿಕ್ಕಮಗಳೂರಿನ ಸಂಬಂಧಿಯ ಮನೆಯಲ್ಲಿದ್ದರೂ ಅಲ್ಲಿಯೂ ಪತಿಯ ಮನೆಯವರಿಂದ ಕಿರಿಕ್ ಆದ ಕಾರಣ ಫೆಬ್ರವರಿ 16ರಂದು ಖಲೀಲ್‍ನ ಮನೆಯನ್ನು ಹುಡುಕಿ ಅವರ ಮನೆಗೆ ಹೋದೆ. ಆ ಸಂದರ್ಭದಲ್ಲಿ ಖಲೀಲ್ ಮನೆಯಲ್ಲಿ ಇಲ್ಲದ ಕಾರಣ ಏನೂ ಮಾಡಲಾಗದು ಎಂದು ಹೇಳುವ ಆತನ ತಂದೆ, ಈ ಬಗ್ಗೆ ಮಾತುಕತೆ ನಡೆಸುವ ಭರವಸೆ ನೀಡುತ್ತಾರೆ. ಇದೇ ವೇಳೆ ತಾನು ಠಾಣೆಗೆ ಹೋಗಿ ಮಾಹಿತಿ ನೀಡಿದ್ದೆ ಎನ್ನುತ್ತಾರೆ ಆಸಿಯಾ!
ಮೂರು ದಿನ ಸುಳ್ಯದಲ್ಲೇ ಇರುವ ಬಗ್ಗೆ ಮಾಹಿತಿ ಪಡೆದು ಎಸ್‍ಡಿಪಿಐಯ ಮುಖಂಡರು, ಮಧ್ಯ ಪ್ರವೇಶಿಸಿದಾಗ ಮದುವೆಯಾಗಿದ್ದು ಹೌದು, ಆದರೆ ಇಲ್ಲಿ ನಮಗೆ ಜೀವನ ನಡೆಸಲು ಕಷ್ಟ ಆಗಿರುವುದರಿಂದ ಚೆನ್ನೈ ಅಥವಾ ಮುಂಬಯಿ ಹೋಗೋಣ ಎಂದು ಖಲೀಲ್ ತಿಳಿಸುತ್ತಾನೆ. ಆದರೆ ಅದೆಲ್ಲಾ ಹೊಸ ಊರು ಆಗಿದ್ದರಿಂದ ನಾನು ನಿರಾಕರಿಸಿ ಮಾರ್ಚ್ 11ರಂದು ಮೈಸೂರಿನಲ್ಲಿ ಫ್ಲ್ಯಾಟ್ ಗೊತ್ತು ಪಡಿಸಿದ್ದೆ. ಈ ಸಂದರ್ಭದಲ್ಲಿ ನನ್ನೊಂದಿಗೆ ಖಲೀಲ್, ಆತನ ಸಹೋದರ ಮತ್ತು ಅತ್ತಿಗೆಯೂ ಮೈಸೂರಿಗೆ ಬಂದು ನಮ್ಮಿಬ್ಬರನ್ನು ಬಿಟ್ಟು ಹೋಗಿದ್ದು, ನಾಲ್ಕು ದಿನ ನಾವು ಅಲ್ಲೇ ಇದ್ದೆವು. ಕ್ರಮೇಣ ಖಲೀಲ್‍ನಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ನನ್ನ ಪ್ರಾಯ ಹೆಚ್ಚಾಗಿದೆ ಎನ್ನುವ ನೆಪಹೇಳಿ ನನ್ನ ಸಂಪರ್ಕದಿಂದ ದೂರ ಇರುತ್ತಾನೆ. ಕರೆ ಮಾಡಿದಾಗ ನೆಪ ಹೇಳುತ್ತಾ ಬರುತ್ತಿದ್ದ. ಹಬ್ಬದಂದು ಬರುತ್ತೇನೆ ಎಂದು ಭರವಸೆ ನೀಡಿದ್ದರೂ, ಆ ದಿನ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ.
ಗೂಗಲ್‍ನಲ್ಲಿ ವಿಳಾಸ ಹುಡುಕಿ ಎಸ್.ಪಿ. ಬಳಿ ಹೋದೆ:
ಖಲೀಲ್ ನಡೆಯಿಂದ ಅನುಮಾನಗೊಂಡು, ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ಕಚೇರಿಯ ವಿಳಾಸವನ್ನು ಗೂಗಲ್ ಮೂಲಕ ಸಂಗ್ರಹಿಸಿ ಹಬ್ಬ ಮುಗಿದ ಬಳಿಕ ಮಂಗಳೂರಿಗೆ ಬಂದು ನೇರವಾಗಿ ಎಸ್.ಪಿ.ಯವರ ಬಳಿ ಹೋಗಿ ತನ್ನ ದುರಂತ ಜೀವನದ ಕಥೆಯನ್ನು ಹೇಳಿದೆ. ಖಲೀಲ್ ವಿರುದ್ಧ ಕೇಸು ನೀಡುವಂತೆ ಎಸ್.ಪಿ.ಯವರು ಹೇಳಿದರೂ, ಅದರಿಂದ ಯಾವುದೇ ಪ್ರಯೋಜನವಾಗದು ಎಂದು ಅರಿವಿದ್ದ ಕಾರಣ, ಕೇಸಿಗಿಂತ ಪತಿ ಮುಖ್ಯ ಎಂದು ಹೇಳಿದೆ. ಈ ವೇಳೆ ಸುಳ್ಯ ಠಾಣೆಗೆ ಹೋಗಿ ದೂರು ಕೊಡಿ ಎಂದು ಎಸ್.ಪಿ.ಯವರು ಕಳುಹಿಸುತ್ತಾರೆ. ಅಲ್ಲಿಗೆ ಹೋದಾಗ, ಖಲೀಲ್ ಕಡೆಯವರು ನನ್ನನ್ನು ನೋಡಿ ವ್ಯಂಗ್ಯವಾಗಿ ಮಾತನಾಡುತ್ತಾರೆ.
ಇಲ್ಲಿಯೂ ನ್ಯಾಯ ಮರೀಚಿಕೆ ಎಂದು ಗೊತ್ತಾಗಿ ಅಲ್ಲಿಂದ ಹೊರಟಾಗ ಠಾಣೆಯ ಎಸ್.ಐ., ಎಸ್.ಪಿ.ಯವರಿಗೆ ಕರೆ ಮಾಡಿ ತಿಳಿಸುತ್ತಾರೆ. ಈ ಸಂದರ್ಭ ಅವರು ಪುತ್ತೂರು ಡಿವೈಎಸ್‍ಪಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಅವರು ಅಲ್ಲಿಗೆ ಬಂದು ಖಲೀಲ್ ಜೊತೆ, ಮನೆಯವರನ್ನೂ ಠಾಣೆಗೆ ಕರೆಸಿ ಬುದ್ಧವಾದ ಹೇಳುತ್ತಾರೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಅವರು ನೆಪ ಹೇಳುತ್ತಾರೆ.
ಏನೇ ಆದರೂ ತಾನು ಪತಿ ಸಿಗದೆ ಹೋಗಲಾರೆ ಎಂದು ಪಣ ತೊಟ್ಟು ರಸ್ತೆಬದಿಯಲ್ಲೇ ವಾಸವಿರುವುದಾಗಿ ಡಿವೈಎಸ್‍ಪಿಯವರಿಗೆ ತಿಳಿಸಿದೆ. ಬಳಿಕ ಠಾಣೆಯ ಸಮೀಪವೇ ಇರುವ ವಸತಿ ಗೃಹದಲ್ಲಿ ಕೋಣೆ ಗೊತ್ತು ಮಾಡಿ ಈಗಲೂ ಅಲ್ಲೇ ವಾಸವಿದ್ದಾರೆ. ಈ ಹೋರಾಟದಲ್ಲಿ ಎಷ್ಟೇ ಕಷ್ಟ ಎದುರಾದರೂ ನ್ಯಾಯ ಸಿಗದೆ ಕದಲುವುದಿಲ್ಲ ಎಂದು ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ. ನನಗೆ ಏನಾದರು ಅನಾಹುತ ಆದರೆ ಖಲೀಲ್, ಆತನ ಮನೆಯವರು, ಊರವರೇ ಕಾರಣ ಎಂದು ಈಗಾಗಲೇ ಠಾಣೆಗೆ ಲಿಖಿತವಾಗಿ ತಿಳಿಸಿದ್ದೇನೆ ಎಂದು ಆಸಿಯಾ ತಿಳಿಸಿದ್ದು, ಪ್ರಕರಣ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *