`ಖಾದರ್ ಉಳ್ಳಾಲವನ್ನು ಜಮೀರ್ ಕ್ಷೇತ್ರ ಮಾಡಿದರು’ ಕಾಂಗ್ರೆಸ್ ಕೌನ್ಸಿಲರ್ ಗರಂ!

ಮಂಗಳೂರು: “ಉಳ್ಳಾಲದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದಕ್ಕೆ ಇಲ್ಲಿನ ಶಾಸಕರೇ ಕಾರಣರಾಗಿದ್ದು, ಇವರು ಉಳ್ಳಾಲವನ್ನು ಜಮೀರ್ ಅಹ್ಮದ್ ಅವರ ಕ್ಷೇತ್ರದಂತೆ ಮಾಡಿದ್ದಾರೆ” ಇದು ಕಾಂಗ್ರೆಸ್ ಕೌನ್ಸಿಲರ್ ಸ್ವಪಕ್ಷದ ಶಾಸಕರ ವಿರುದ್ಧ ಮಾಡಿರುವ ಆರೋಪ! ಈ ರೀತಿಯಾಗಿ ಶಾಸಕರ ವಿರುದ್ಧ ಆರೋಪ ಮಾಡಿದವರು ಉಳ್ಳಾಲ ನಗರಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಅವರಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯು.ಟಿ.ಖಾದರ್ ಅವರು ಹಿಂದೆ ಆರೋಗ್ಯ ಸಚಿವರಾಗಿದ್ದವರು. ಆ ಸಮಯದಲ್ಲಿ ಅವರು ಏನೆಲ್ಲಾ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಈಗ ಉಳ್ಳಾಲದಲ್ಲಿ ಕೌನ್ಸಿಲರ್ ಗಳ ಸಹಿತ ತುಂಬಾ ಜನರಿಗೆ ಕೊರೊನಾ ಬಂದಿದೆ. ಇದಕ್ಕೆ ಕಾರಣ ಎಂದರೆ ದುಬೈಯಿಂದ ಬಂದ ಜನರನ್ನು ಅವರ ಮನೆಗಳಿಗೇ ಹೋಗಿ ಖಾದರ್ ಭೇಟಿ ನೀಡಿದ್ದೇ ಆಗಿದೆ. ಇದರ ಪರಿಣಾಮವಾಗಿ ಪೊಲೀಸರು, ನಗರಸಭೆ ಹಾಗೂ ಉಳ್ಳಾಲದ ಜನರಿಗೆ ಕೊರೊನಾ ಬಂದಿದೆ. ಮನೆಗೆ ಹೋಗಿ ಭೇಟಿ ಮಾಡಿದ್ದಲ್ಲದೆ ದುಬೈಯಿಂದ ಬಂದವರನ್ನು ಸ್ವಾಗತಿಸಲಾಯಿತು, ಊಟ ಕೊಡಲಾಯಿತು. ಖಾದರ್ ಈ ರೀತಿಯಾಗಿ ಮಾಡಿದ್ದು ಉಳ್ಳಾಲವನ್ನು ಜಮೀರ್ ಅಹ್ಮದ್ ಅವರ ಕ್ಷೇತ್ರದಂತೆ ಮಾಡಲಿಕ್ಕಾಗಿಯೇ? ಎಂದು ರವಿಚಂದ್ರ ಕಿಡಿಕಾರಿದ್ದಾರೆ.
ನಾನೊಬ್ಬ ಕಟ್ಟಾ ಕಾಂಗ್ರೆಸ್ಸಿಗ, ಕೊರೊನಾ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಹಿಂದೂ ಬಾಂಧವರು ಮನೆಯಿಂದ ಹೊರಗೆ ಹೋಗುವಾಗ ಸರ್ಕಾರದ ನಿಯಮ ಪಾಲಿಸಬೇಕು. ಕೊರೊನಾಕ್ಕೆ ಯಾವುದೇ ಮದ್ದಿಲ್ಲ, ಕೊರೊನಾ ಬಂದವರನ್ನು ಆಸ್ಪತ್ರೆಗೆ ಹಾಕಿ ಕೇವಲ ಟಿ.ಬಿ.ಯ ಮಾತ್ರೆ ಕೊಡುತ್ತಾರೆ. ಸರ್ಕಾರ ಯಾವುದಾದರೂ ಆಗಲಿ, ಕೊರೊನಾ ವಿಚಾರದಲ್ಲಿ ಏನೂ ಮಾಡಲಾಗದು. ನಮಗೆ ಜನರ ಜೀವ ಮುಖ್ಯ, ಆದರೆ ಖಾದರ್ ಚೈನಾದ ಬಗ್ಗೆ ಮಾತನಾಡುತ್ತಾರೆ. ಅದರ ಪರಿಣಾಮವಾಗಿ ಉಳ್ಳಾಲದ ಪರಿಸ್ಥಿತಿ ಏನಾಗಿದೆ ನೋಡಿ ಎಂದು ರವಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಬಿ. ಫಾರಂ ಪಡೆದು ಗೆದ್ದು ನಗರಸಭೆಯ ಕೌನ್ಸಿಲರ್ ಆಗಿರುವ ರವಿಚಂದ್ರ, ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ಬಹಿರಂಗವಾಗಿ ಆರೋಪ ಮಾಡುವುದು ಮೊದಲೇನಲ್ಲ. ಆದರೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮೌನವಾಗಿ ಅವರ ವರ್ತನೆಗೆ ಸಹಕಾರ ನೀಡಿ ಬಲ ತುಂಬಿದೆ ಎನ್ನುವ ಆಕ್ರೋಶ ನೈಜ ಕಾರ್ಯಕರ್ತರಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *