ಕೋವಿಡ್ ಸಾವಿನ ಸಂಶಯಕ್ಕೆ ಜಿಲ್ಲಾಡಳಿತ ಸ್ಪಂದಿಸಲಿ

ಮಂಗಳೂರು: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚುತ್ತಲೇ ಇದೆ, ಆದರೆ ಈ ಬಗ್ಗೆ ಜನರಲ್ಲಿ ಸಂಶಯಕ್ಕೆ ಕಾರಣವಾಗಿದ್ದು, ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸಿ ಸಂಶಯ ದೂರಮಾಡಬೇಕಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಒತ್ತಾಯಿಸಿದ್ದಾರೆ.
ಫ್ಲೂ, ಶೀತ, ತಲೆನೋವು ಹೊಂದಿರುವ ಆರೋಗ್ಯವಂತರು ಆಸ್ಪತ್ರೆಗೆ ಹೋಗಿ `ಕೋವಿಡ್-19′ ಪರೀಕ್ಷೆ ನಡೆಸಿದರೆ ಪಾಸಿಟಿವ್ ಎಂದು ತೋರಿಸುತ್ತಿದೆ. ಇದರಿಂದಾಗಿ ತೀವ್ರ ನಿಗಾ ಘಟಕ ಸೇರುವ ವೃದ್ಧ ರೋಗಿಗಳಿಗೆ ಇತರ ಕಾಯಿಲೆಗಳಿಗೆ ಬಳಸುತ್ತಿದ್ದ ಔಷಧಿ ಸೇವನೆಗೆ ಅವಕಾಶ ನೀಡದ ಕಾರಣದಿಂದ ಅವರು ಸಾವನ್ನಪ್ಪುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಜನರು ಆತಂಕಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಫಾರೂಕ್ ಮನವಿ ಮಾಡಿದ್ದಾರೆ.
ಪ್ರಸ್ತುತ ದಿನಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ಸಮಯದಲ್ಲಿ ಕರಾವಳಿ ಭಾಗದಲ್ಲಿ ಫ್ಲೂ, ನೆಗಡಿ, ಶೀತ ಕಂಡು ಬರುವುದು ಸಾಮಾನ್ಯವಾಗಿದೆ. ಕೆಲವರಿಗೆ ಡೆಂಗ್ಯೂ, ಮಲೇರಿಯಾ, ನ್ಯುಮೋನಿಯಾ ಮುಂತಾದ ತೀವ್ರವಾದ ಕಾಯಿಲೆಗಳೂ ಬಾಧಿಸುತ್ತದೆ. ಆದರೆ ಕೊರೊನ ತಪಾಸಣೆಗೆ ಇರುವ ಯಂತ್ರಗಳು ಇಂಥ ಕಾಯಿಲೆ ಹೊಂದಿದವರನ್ನೇ ಪಾಸಿಟಿವ್ ಎಂದು ತೋರಿಸುತ್ತಿದೆ. ಲಿವರ್, ಕಿಡ್ನಿ, ಹೃದಯ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ, ಮೊದಲು ಕೋವಿಡ್ ಟೆಸ್ಟ್ ಮಾಡಿದಾಗ ಕೋವಿಡ್ ಪಾಸಿಟಿವ್ ಬರುತ್ತಿರುವುದರಿಂದ ರೋಗಿಗಳ ಮನೆಯವರಲ್ಲೂ ಸಂಶಯಕ್ಕೆ ಕಾರಣವಾಗುತ್ತಿದೆ. ಕೋವಿಡ್ ಪೀಡಿತರ ಹೆಸರು ಗೌಪ್ಯವಾಗಿಡುತ್ತೇವೆ ಎಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಹೇಳುತ್ತಿದ್ದರೂ ವ್ಯಕ್ತಿಯ ಹೆಸರು ಹೊರತುಪಡಿಸಿ ಇತರ ಕುರುಹುಗಳನ್ನು ಪರೋಕ್ಷವಾಗಿ ಬಹಿರಂಗಪಡಿಸುತ್ತಿದೆ. ಇದು ರೋಗಿ ಮತ್ತು ಅವರ ಕುಟುಂಬಸ್ಥರನ್ನು ಮಾನಸಿಕವಾಗಿ ಹಿಂಸೆಗೆ ಕಾರಣವಾಗುತ್ತಿರುವುದರಿಂದ ಇಂಥ ಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಫಾರೂಕ್ ತಿಳಿಸಿದ್ದಾರೆ.