ಕೋವಿಡ್‌ ಲಸಿಕೆ ಭಾರತದಲ್ಲಿ ಉಚಿತವಾಗಿ ಸಿಗಲಿದೆ: ಆದಾರ್‌

ನವದೆಹಲಿ: ಆಕ್ಸ್‌ಫರ್ಡ್ ವಿವಿಯ ಕೊರೊನಾ ಲಸಿಕೆ ಸಂಪೂರ್ಣ ಯಶಸ್ವಿಯಾದಲ್ಲಿ ಭಾರತಲ್ಲಿಯೇ ಉತ್ಪಾದನೆಯಾಗಲಿದ್ದು, ಭಾರತಕ್ಕೆ ಉತ್ಪಾದನೆಯ ಅರ್ಧದಷ್ಟು ಲಸಿಕೆ ನೀಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ನಮ್ಮಲ್ಲಿ ಉತ್ಪಾದನೆಯಾಗುವ ಲಸಿಕೆಯ ಶೇ.50 ಭಾರತದ ಬಳಕೆಗೆ ಮೀಸಲಾಗಿರಲಿದೆ ಎಂದು ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಆದಾರ್ ಪೂನಾವಾಲಾ ಹೇಳಿದ್ದಾರೆ.
ಜಗತ್ತಿನ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿರುವ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇದರ ಉತ್ಪಾದನೆಯಲ್ಲಿ ತೊಡಗಲಿದೆ. ಆಕ್ಸ್ಫರ್ಡ್ ವಿವಿ ಸಹಭಾಗಿತ್ವದಲ್ಲಿ ಇದನ್ನು ಉತ್ಪಾದಿಸುತ್ತಿರುವ ಅಸ್ಟ್ರಾಜೆನೆಕಾ ಕಂಪೆನಿ ಸಿರಂ ಇನ್ಸ್ಟಿಟ್ಯೂಟ್ಗೆ ಉತ್ಪಾದನಾ ಪರವಾನಗಿ ನೀಡಿದೆ. ಈ ಸಂಸ್ಥೆ ಉತ್ಪಾದಿಸಿದ ಲಸಿಕೆಯಲ್ಲಿ ಶೇ.50 ಭಾರತದ ಬಳಕೆಗೆ ಸಿಗಲಿದೆ. ಇನ್ನುಳಿದದ್ದು ಬೇರೆ ದೇಶಗಳಿಗೆ ಹಂಚಿಕೆಯಾಗಲಿದೆ. ನವೆಂಬರ್- ಡಿಸೆಂಬರ್ ವೇಳೆಗೆ ಹತ್ತಾರು ಲಕ್ಷ ಡೋಸ್ ಉತ್ಪಾದನೆಯಾದರೆ, ಮುಂದಿನ ಮಾರ್ಚ್ ವೇಳೆಗೆ 3-4 ಕೋಟಿ ಡೋಸ್ ತಯಾರಾಗಲಿದೆ ಎಂದು ಆದಾರ್ ಹೇಳಿದ್ದಾರೆ. ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆದಾರ್, ಇದನ್ನು ಸರ್ಕಾರವೇ ನಿರ್ಧರಿಸಲಿದೆ. ಆರಂಭದಲ್ಲಿ ಹಿರಿಯರು, ಹೆಚ್ಚು ಅಪಾಯದಲ್ಲಿರುವವರು ಹಾಗೂ ಮುಂಚೂಣಿಯಲ್ಲಿದ್ದು, ಕೋವಿಡ್ ರೋಗಿಗಳಿಗೆ ಆರೈಕೆ ಮಾಡುತ್ತಿರುವ ವೈದ್ಯ ಸಿಬ್ಬಂದಿಗೆ ನೀಡುವುದು ನ್ಯಾಯಯುತ ಹಂಚಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.‌ ಭಾರತದಲ್ಲಿ ರೋಗಿಗಳು ಈ ಲಸಿಕೆಗೆ ಹಣವನ್ನು ಪಾವತಿಸುವುದು ಬೇಡ, ಸರ್ಕಾರ ಖರೀದಿ ಮಾಡಿ ಜನರಿಗೆ ಉಚಿತವಾಗಿ ನೀಡಲಿದೆ ಎಂದು ಅವರು ಹೇಳಿದ್ದಾರೆ. ಜನರು ಇದನ್ನು ಖರೀದಿಸುವ ಅಗತ್ಯ ಎದುರಾಗದು. ಏಕೆಂದರೆ ಸರ್ಕಾರವೇ ಇದನ್ನು ಖರೀದಿಸಿ ಉಚಿತವಾಗಿ ಹಂಚಲಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಸರ್ಕಾರ ಈ ಹೊಣೆಗಾರಿಕೆ ನಿಭಾಯಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *