ಕೋಲಾರ ತಹಶೀಲ್ದಾರ್ ಹತ್ಯೆ: ಯಾದವ ಸಂಘ ಖಂಡನೆ

ಗುಬ್ಬಿ: ಹಿಂದುಳಿದ ವರ್ಗಗಳ ಬಡತನದ ಕಷ್ಟವನ್ನು ಅನುಭವಿಸಿ ಶಿಕ್ಷಣ ಪಡೆದು ತಹಸೀಲ್ದಾರ್ ಹುದ್ದೆ ಅಲಂಕರಿಸಿ ನಿಷ್ಠಾವಂತ ಅಧಿಕಾರಿಯಾಗಿ ಕಾನೂನು ರೀತಿ ಕೆಲಸ ಮಾಡುತ್ತಿದ್ದ ಚಂದ್ರಮೌಳೇಶ್ವರ್ ಹತ್ಯೆ ಖಂಡನೀಯ. ಈ ಪ್ರಕರಣದಲ್ಲಿ ಭಾಗಿಯಾದ ಕಾಣದ ಕೈಗಳನ್ನು ಹಿಡಿಯುವ ಉನ್ನತ ತನಿಖೆ ಸರ್ಕಾರ ಮಾಡಬೇಕು ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ಆಗ್ರಹಿಸಿದರು. ಪಟ್ಟಣದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬಂಗಾರಪೇಟೆ ತಾಲ್ಲೂಕಿನಲ್ಲಿ ಜಮೀನು ವಿವಾದವಿದ್ದ ಗ್ರಾಮಕ್ಕೆ ಸರ್ವೆ ವಿಚಾರವಾಗಿ ತೆರಳಿದ್ದ ಸಂದರ್ಭದಲ್ಲಿ ನಿವೃತ್ತ ಶಿಕ್ಷಕನೊರ್ವ ಏಕಾಏಕಿ ತಹಸೀಲ್ದಾರ್ ಅವರ ಮೇಲೆರಗಿ ಮಾರಕ ಆಯುಧ ಡ್ರಾಗನ್ ಬಳಸಿ ಹತ್ಯೆ ಮಾಡಿರುವುದು ಸಂಶಯಾಸ್ಪದವಾಗಿದೆ. ತೀವ್ರ ತನಿಖೆ ಮೂಲಕ ಇದರ ಸತ್ಯಾಸತ್ಯತೆ ಹೊರಬರಬೇಕಿದೆ ಎಂದರು.
ಸ್ಥಳದಲ್ಲಿ 8 ಮಂದಿ ಪೊಲೀಸ್ ಸಿಬ್ಬಂದಿ ಇದ್ದು ಈ ಕೃತ್ಯ ನಡೆದಿರುವುದು ವಿಪರ್ಯಾಸ. 30 ನಿಮಿಷಗಳ ಕಾಲ ಒದ್ದಾಡಿ ತೀವ್ರ ರಕ್ತಸ್ರಾವಕ್ಕೆ ಒಳಗಾದ ತಾಲ್ಲೂಕು ದಂಡಾಧಿಕಾರಿಗಳ ಈ ದುಸ್ಥಿತಿ ಸ್ಥಳದಲ್ಲಿದ್ದ ಪೊಲೀಸ್ ವೈಪಲ್ಯ ಎತ್ತಿಹಿಡಿದಿದೆ. ಚೂರಿ ಇರಿದ ವ್ಯಕ್ತಿ ಸ್ಥಳದಲ್ಲೇ ಆರಾಮಾಗಿ ನಿಂತಿದ್ದು ಸಹ ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಘಟನೆಯನ್ನು ದಕ್ಷ ಅಧಿಕಾರಿಗಳಿಂದ ನಡೆಸಿ ಮೃತ ತಹಸೀಲ್ದಾರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ ಅವರು ರಾಜ್ಯಾದಾದ್ಯಂತ ಈ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲು ರೂಪುರೇಷೆ ಸಿದ್ದಗೊಳಿಸಲಾಗಿದೆ. ಕೊರೋನಾ ಹಿನ್ನಲೆ ಜಾಗೃತಿ ವಹಿಸಿಕೊಂಡು ಪ್ರತಿಭಟಿಸಲಾಗುವುದು ಎಂದರು.
ತಾಲ್ಲೂಕು ಯಾದವ ಸಂಘದ ಕಾರ್ಯಾಧ್ಯಕ್ಷ ಗುಡ್ಡದಹಳ್ಳಿ ಬಸವರಾಜು ಮಾತನಾಡಿ ತಹಸೀಲ್ದಾರ್ ಚಂದರಮೌಳೇಶ್ವರ್ ಹತ್ಯೆ ಬಂಗಾರಪೇಟೆ ತಾಲ್ಲೂಕು ಸ್ತಬ್ದಗೊಂಡಿದೆ. ಪ್ರಾಮಾಣಿಕ ಮತ್ತು ದಕ್ಷ ಎಂದೆನಿಸಿಕೊಂಡ ಅಧಿಕಾರಿಯ ಸ್ಥಿತಿ ಹೀಗೆ ಆಗಿದರೆ ಸರ್ಕಾರಿ ನೌಕರರು ಕೆಲಸ ಮಾಡುವುದಾದರೂ ಹೇಗೆ ಎನ್ನುವ ಆತಂಕ ಇಡೀ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಈ ಹತ್ಯೆ ಪ್ರಕರಣ ಗಮನಿಸಿದರೆ ಪೂರ್ವನಿಯೋಜಿತ ಎನಿಸುತ್ತಿದೆ. ಇದರ ತನಿಖೆ ಸ್ವಚ್ಚ ರೀತಿಯಲ್ಲಿ ಸಾಗಿ ನ್ಯಾಯ ಒದಗಿಸಬೇಕಿದೆ. ಜತೆಗೆ ಕೃತ್ಯವೆಸಗಿದ ವ್ಯಕ್ತಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕಿದೆ. ಇಲ್ಲವಾದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಡೀ ಘಟನಾವಳಿ ಗಮನಿಸಿದರೇ ದಕ್ಷ ಅಧಿಕಾರಿಗಳು ಕೆಲಸ ಮಾಡಲು ಹಿಂಜರಿಯಬೇಕಿದೆ. ಬಡತನ ಮೂಲದಿಂದ ಬೆಳೆದು ಉನ್ನತ ಸ್ಥಾನ ಪಡೆದ ಹಿಂದುಳಿದವರ್ಗ ಹಿನ್ನಲೆಯ ಅಧಿಕಾರಿ ಈ ತಹಸೀಲ್ದಾರ್ ಬಡವರ ಕಷ್ಟಕ್ಕೆ ಸ್ಪಂದಿಸುವ ಔದಾರ್ಯ ಎಲ್ಲರೂ ಕಂಡಿದ್ದರು. ಇಂತಹ ಹೀನ ಕೃತ್ಯಕ್ಕೆ ಬಲಿಯಾದ ಸ್ಥಿತಿ ಗಮನಿಸಿದರೆ ನಮ್ಮ ಮಕ್ಕಳನ್ನು ಉನ್ನತ ವ್ಯಾಸಂಗ ಮಾಡಿಸುವ ಅಗತ್ಯವೂ ಇಲ್ಲ. ದೊಡ್ಡ ಹುದ್ದೆಯ ಕೆಲಸಕ್ಕೂ ಸೇರಿವುದು ಬೇಡ ಎಂಬ ಮನಸ್ಥಿತಿ ಗ್ರಾಮೀಣ ಜನರ ಬಾಯಲ್ಲಿ ಬರುತ್ತಿದೆ. ಈ ನಿಟ್ಟಿನಲ್ಲಿ ಉನ್ನತಮಟ್ಟದ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ರಾಜಣ್ಣ, ಯಾದವ ಸಂಘದ ಮುಖಂಡರಾದ ಯರ್ರಪ್ಪ, ಸಣ್ಣತಿಮ್ಮಯ್ಯ, ತುಳಸಿದಾಸ್, ಮಂಜುನಾಥ್, ತಿಮ್ಮಣ್ಣ, ರಾಜಣ್ಣ, ನಾಗರಾಜು ಇತರರು ಇದ್ದರು.

Leave a Reply

Your email address will not be published. Required fields are marked *