ಕೋಟೆಕಾರ್: ಅಮಾನವೀಯ ಘಟನೆ, ಅನಾರೋಗ್ಯದಿಂದ ರಾತ್ರಿಯಿಡೀ ರಸ್ತೆಯಲ್ಲೇ ಹೊರಳಾಡಿದ ವ್ಯಕ್ತಿ!

ಮಂಗಳೂರು: ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೊಳಗಾಗಿ ರಸ್ತೆಬದಿ ಹೊರಳಾಡುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ನೆರವಿಗೆ ಬಾರದೆ ಅಮಾನವೀಯತೆಯಿಂದ ವರ್ತಿಸಿದ ಪ್ರಕರಣ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿ ಜಂಕ್ಷನ್‍ನಲ್ಲಿ ನಡೆದಿದೆ.
ವಲಸೆ ಕಾರ್ಮಿಕನಾಗಿರುವ ವ್ಯಕ್ತಿಯೊಬ್ಬರು ಮೊನ್ನೆ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಅನಾರೋಗ್ಯಕ್ಕೆ ತುತ್ತಾಗಿ ಬೀರಿ ಜಂಕ್ಷನ್ ಬಳಿ ರಸ್ತೆಬದಿ ಬಿದ್ದು ಹೊರಳಾಡತೊಡಗಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಅವರನ್ನು ಕಂಡ ಸಾರ್ವಜನಿಕರು, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ, ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಯಾರೂ ಸ್ಪಂದಿಸಿಲ್ಲ. ಬಳಿಕ ಕರೆ ಮಾಡಿದಾಗ ಸ್ವೀಕರಿಸಲೂ ಇಲ್ಲ, ಇದರಿಂದ ಬೇಸತ್ತ ಜನ ಆಂಬ್ಯುಲೆನ್ಸ್‍ಗೆ ಮಾಹಿತಿ ನೀಡಿದರೂ ಸೂಕ್ತವಾದ ಸ್ಪಂದನೆ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳ ಅಮಾನವೀಯತೆಯ ಪರಿಣಾಮ ಎನ್ನುವಂತೆ ವ್ಯಕ್ತಿ ಭಾನುವಾರ ಬೆಳಿಗ್ಗೆಯೂ ರಸ್ತೆಯಲ್ಲೇ ಹೊರಳಾಡುತ್ತಿದ್ದರು. ಆದರೂ ಯಾರೊಬ್ಬ ಅಧಿಕಾರಿಯೂ ಅತ್ತ ಕಡೆ ಸುಳಿಯದ ಕಾರಣ ಸ್ಥಳೀಯ ಮಾಧ್ಯಮ ಕಚೇರಿಗೆ ಕರೆ ಮಾಡಿದರು. ತಕ್ಷಣ ಸ್ಪಂದಿಸಿದ ಹಿರಿಯ ಪತ್ರಕರ್ತರಾದ ವಿದ್ಯಾಧರ್ ಶೆಟ್ಟಿಯವರು ಸ್ಥಳಕ್ಕೆ ಧಾವಿಸಿ, ಅಧಿಕಾರಿಗಳಿಗಿಲ್ಲದ ಬದ್ಧತೆಯನ್ನು ಪ್ರದರ್ಶಿಸಿದರು. ವ್ಯಕ್ತಿಯ ದಯನೀಯ ಪರಿಸ್ಥಿತಿಯನ್ನು ಕಂಡು 108 ಆಂಬುಲೆನ್ಸ್‍ಗೆ ಕರೆ ಮಾಡಿದಾಗ ಸ್ಥಳಕ್ಕೆ ಬೈಕ್ ಆಂಬುಲೆನ್ಸ್ ಆಗಮಿಸಿದ್ದು, ಬಳಿಕ ಉಳ್ಳಾಲ ಪೊಲೀಸ್ ರಂಜಿತ್ ಮತ್ತು ಬೈಕ್ ಆಂಬುಲೆನ್ಸ್‍ನ ಸವಾರ ಮಹಂತೇಶ್ ಪ್ರಥಮ ಚಿಕಿತ್ಸೆ ಒದಗಿಸಿ ವ್ಯಕ್ತಿಯನ್ನು ಉಪಚರಿಸಿದರು.
ಮತ್ತೊಮ್ಮೆ ಆಂಬ್ಯುಲೆನ್ಸ್‍ಗೆ ಕರೆ ಮಾಡಿದಾಗ ನಮ್ಮದು ಕೋವಿಡ್ ಆಂಬ್ಯುಲೆನ್ಸ್, ಸಾಧಾರಣ ಕೇಸ್‍ಗಳಿಗೆ ಬೇರೆ ಆಂಬುಲೆನ್ಸ್ ಬರುತ್ತದೆ. ಆದರೆ ಅದು ಬ್ಯುಸಿಯಾಗಿರುವುದರಿಂದ ವೈಟಿಂಗ್ ಲಿಸ್ಟ್‍ಗೆ ಹಾಕಿದ್ದೇವೆ ಎನ್ನುವ ಬೇಜವಾಬ್ದಾರಿತನದ ಉತ್ತರವನ್ನು ನೀಡಲಾಯಿತು. ಈ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್‍ಗೆ ಕರೆ ಮಾಡಿ ವಿಷಯ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಖಾದರ್ ಆಂಬ್ಯುಲೆನ್ಸ್ ವ್ಯವಸ್ಥೆ ಒದಗಿಸಿದರು.
ಅಸಹಾಯಕಿಯಾದ ಪ.ಪಂ.ನ ಉಪಾಧ್ಯಕ್ಷೆ!
ರಸ್ತೆಯಲ್ಲೇ ಬಿದ್ದು ವ್ಯಕ್ತಿ ನರಳುತ್ತಿದ್ದುದನ್ನು ಕಂಡ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಭಾರತಿಯೂ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಮಾಡಿದರು. ಕೇಂದ್ರ, ರಾಜ್ಯ ಮತ್ತು ಪಟ್ಟಣ ಪಂಚಾಯತ್‍ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಭಾರತಿಯವರ ಮನವಿಯನ್ನು ಯಾವೊಬ್ಬ ಅಧಿಕಾರಿಯೂ ಕಿವಿಗೆ ಹಾಕಿಕೊಳ್ಳದೆ ನಿಮ್ಮ ಆಡಳಿತ ನಮಗೆ ಡೋಂಟ್ ಕ್ಯಾರ್ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವ್ಯಕ್ತಿಯ ಬಗ್ಗೆ ಎಲ್ಲರಿಗೂ ವಿಷಯ ತಿಳಿಸಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟೆ. ಆದರೆ ಯಾರೂ ತಮ್ಮ ಮಾತಿಗೆ ಸ್ಪಂದಿಸಲೇ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನಿನ್ನೆಯ ಘಟನೆಯ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನಾರೋಗ್ಯಪೀಡಿತರ ಚಿಕಿತ್ಸೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಸ್ಥಳಿಯಾಡಳಿತದಿಂದ ಜಾಗೃತಿ ಸಭೆಗಳು, ಮಾಹಿತಿ ಕಾರ್ಯಕ್ರಮಗಳು ನಡೆಯುತ್ತವೆ. ಅಂಥ ಸಭೆಗಳು ಕೋಟೆಕಾರ್‍ನಲ್ಲೂ ನಡೆದಿದ್ದು, ಇಲ್ಲಿನ ಮುಖ್ಯಾಧಿಕಾರಿಗಳೂ, ಆರೋಗ್ಯ ಅಧಿಕಾರಿ ವಿಕ್ರಂ, ಪ್ರಾಥಮಿಕ ಆರೋಗ್ಯ ಕೇಂದ್ರದವರು ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದಾರೆ. ಆದರೆ ವ್ಯಕ್ತಿಯೊಬ್ಬರು ಸಾರ್ವಜನಿಕರ ಕಣ್ಣ ಮುಂದೆಯೇ ನರಳುತ್ತಿದ್ದರೂ ಇವರೆಲ್ಲರೂ ಮಾನವೀಯತೆಯನ್ನೇ ಮರೆತು ನರ ಸತ್ತವರಂತೆ ವರ್ತಿಸಿದ್ದಾರೆ.
ಆಂಬ್ಯುಲೆನ್ಸ್‍ಗಳು ಕೊರೊನಾಪೀಡಿತರಿಗೆ ಮಾತ್ರ ಎಂದಾದರೆ ಇತರ ಕಾಯಿಲೆಪೀಡಿತರು ಬಂದವರು ಏನು ಮಾಡಬೇಕು? ಪರಿಸ್ಥಿತಿ ಹೀಗಿದ್ದರೆ ಸರ್ಕಾರಿ ಆಂಬ್ಯುಲೆನ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳು, ಅಧಿಕಾರಿಗಳು ಇರುವುದಾದರೂ ಏಕೆ? ಇಂಥ ಕೆಲಸಕ್ಕೂ ಶಾಸಕರಿಗೇ ಕರೆ ಮಾಡಬೇಕೆ? ಎನ್ನುವುದು ಸಾರ್ವಜನಿಕರ ಪ್ರಶ್ನೆ. ಈ ಪ್ರಕರಣ ಬುದ್ಧಿವಂತರ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೋಟೆಕಾರ್ ಪಟ್ಟಣ ಪಂಚಾಯತ್, ಆರೋಗ್ಯ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
