ಕೊಲ್ಲಲು ಬಂದ ಅಪ್ಪನನ್ನೇ ಕತ್ತರಿಯಿಂದ ಚುಚ್ಚಿ ಕೊಂದ ಬಾಲಕಿ!

ಬೆಂಗಳೂರು: ವ್ಯಕ್ತಿಯೋರ್ವ ತನ್ನ ಮಗಳನ್ನು ಕೊಲ್ಲಲು ಯತ್ನಿಸಿ ಕೊನೆಗೆ ಮಗಳಿಂದಲೇ ಹತ್ಯೆಗೀಡಾದ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ. ಸಪ್ತಕ್ ಬ್ಯಾನರ್ಜಿ(46) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿ ಈತನ 15 ವರ್ಷದ ಪುತ್ರಿಯನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಪ್ತಕ್ ಪತ್ನಿ 2ನೇ ಮಗುವಿನ ಹೆರಿಗೆ ವೇಳೆ ಮೃತಪಟ್ಟಿದ್ದಳು. ಈತನೇ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ. ತನಗಿದ್ದ ಬಾಡಿಗೆ ಮನೆಗಳಿಂದ ಹಣ ಬರುತ್ತಿದ್ದು ಅದನ್ನು ಕುಡಿತಕ್ಕೆ ಖಾಲಿ ಮಾಡುತ್ತಿದ್ದ. ಮಗಳನ್ನು ಶಾಲೆ ಬಿಡಿಸಿದ್ದ ಈತ ಆಕೆಯನ್ನು ಎಲ್ಲಿಗೂ ತೆರಳದಂತೆ ನಿರ್ಬಂಧ ವಿಧಿಸಿದ್ದ.
ಆದರೆ ಬಾಲಕಿ ಗುಟ್ಟಾಗಿ ಎಸ್‍ಎಸ್‍ಎಲ್ ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಳು. ರಾತ್ರಿ ಒಂದು ಗಂಟೆಗೆ ಎದ್ದು ಓದುತ್ತಿದ್ದ ವೇಳೆ ಎಚ್ಚರಗೊಂಡ ಸಪ್ತಕ್ ಬ್ಯಾನರ್ಜಿ ಪಿಯಾನೋ ನುಡಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದ್ದು ಕೋಪದ ಭರದಲ್ಲಿ ಕತ್ತರಿಯಿಂದ ಚುಚ್ಚಿ ಮಗಳ ಕೊಲೆಗೆ ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಮಗಳು ಅದೇ ಕತ್ತರಿಯಿಂದ ತಂದೆಯ ಎದೆಗೆ ಚುಚ್ಚಿದ್ದಾಳೆ. ಈ ವೇಳೆ ಗಾಯಗೊಂಡ ಆತ ಮೃತಪಟ್ಟಿದ್ದಾನೆ. ಗಾಬರಿಗೊಂಡ ಬಾಲಕಿ ಸ್ಥಳೀಯರಿಗೆ ತಿಳಿಸಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *