ಕೊರೋನಾ ನಿಯಂತ್ರಣ ಹೆಸರಲ್ಲಿ ರಾಜ್ಯ ಸರ್ಕಾರದಿಂದ ಮೂರು ಸಾವಿರ ಕೋಟಿ ಹಗರಣ: ಎಸ್.ಡಿ.ಪಿ.ಐ. ಆರೋಪ

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಕೋವಿಡ್-19 ನಿರ್ವಹಣೆಗಾಗಿ ಇಲ್ಲಿಯವರೆಗೆ ಮೂರು ಸಾವಿರದ ಮುನ್ನೂರ ತೊಂಬತ್ತೆರಡು (3392) ಕೋಟಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಯಾವ ಯಾವ ವಿಷಯಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು (RTI) ಮೂಲಕ ಕೇಳಿದಾಗ ಆಡಿಟ್ ಆಗಬೇಕು ಎಂಬ ಮಾಹಿತಿಯನ್ನು ರವಾನಿಸುವ ಮೂಲಕ ತಪ್ಪಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಜೀದ್ ಖಾನ್ ಆರೋಪಿಸಿದ್ದಾರೆ.
ಯಾವ ರೀತಿ ಹಗರಣ ನಡೆದಿದೆ ಎಂಬುವುದಕ್ಕೆ ಉದಾಹರಣೆಯಾಗಿ ನೋಡಿದರೆ 500 ಮಿ.ಲಿ ಸ್ಯಾನಿಟೈಸರ್ ಒಂದಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅಂಗಸಂಸ್ಥೆ ‘ಕರ್ನಾಟಕ ಲಾಜಿಸ್ಟಿಕ್ ಲಿಮಿಟೆಡ್’ ಸಂಸ್ಥೆಯು ರುಪಾಯಿ 78 ರಂತೆ ಪೂರೈಕೆ ಮಾಡಬಹುದು ಎಂದು ಟೆಂಡರ್ ಹಾಕಿದೆ ಹೇಳಿದ್ದು, ಅದನ್ನು ಹೊರತುಪಡಿಸಿ ಒಂದು ಚಿಕ್ಕ ಬಾಟಲ್ ಸ್ಯಾನಿಟೈಸರಿಗೆ ರೂ.600 ರಂತೆ ಖರೀದಿ ಮಾಡಿದೆ.
ಅದೇ ರೀತಿ ಒಂದು ಥರ್ಮಲ್ ಸ್ಕ್ಯಾನರ್ ಬೆಲೆ ಗರಿಷ್ಠ ರೂ.3,650 ಮಾತ್ರ. ಆದರೆ ಇವರು ಉಲ್ಲೇಖ ಮಾಡಿರುವಂತಹದ್ದು ರೂ.9,000.
ಅದೇ ರೀತಿ ಆರ್.ಅಶೋಕ್ ಉಸ್ತುವಾರಿಯಾಗಿರುವ ಕಂದಾಯ ಇಲಾಖಾ ಅಧಿಕಾರಿ ಮಂಜುನಾಥ್ ಪ್ರಸಾದ್ ಎಂಬವರು ಹೈಕೋರ್ಟ್ ಗೆ ಹಾಕಿರುವಂತಹ ಅಫಿಡವಿಟ್ ಪ್ರಕಾರ ರಾಜ್ಯದಲ್ಲಿ ಸುಮಾರು 81ಲಕ್ಷ ಆಹಾರ ಪ್ಯಾಕೆಟ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಒಂದು ಪ್ಯಾಕೆಟ್ ಗೆ ಗರಿಷ್ಠ ರೂ.250 ಖರ್ಚು ಆಗಬಹುದು. ಆದರೆ ಇವರು 250 ರಿಂದ 1,650 ರಷ್ಟು ಖರ್ಚು ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ. ಇದು ಹಗಲು ದರೋಡೆಯಾಗಿದೆ. 81ಲಕ್ಷ ಫೂಡ್ ಪ್ಯಾಕೆಟ್‌ಗಳು ವಿತರಣೆ ಆಗಿದೆ ಎಂಬುವುದಕ್ಕೆ ಸರ್ಕಾರದ ಬಳಿ ಏನು ದಾಖಲೆಗಳಿವೆ ಎಂದು ಮಜೀದ್ ಪ್ರಶ್ನಿಸಿದ್ದಾರೆ.
ಒಂದು ವೆಂಟಿಲೇಟರ್ ಬೆಲೆ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿಗಳು. ಆದರೆ ಸರಕಾರ ರೂ.12 ಲಕ್ಷದಂತೆ 1,000 ವೆಂಟಿಲೇಟರ್‌ಗಳನ್ನು ಖರೀದಿ ಮಾಡಿದೆ. ಇದೇ ತರಹ ಮಾಸ್ಕ್, ಸರ್ಜಿಕಲ್ ಕೈ-ಗ್ಲವಸ್, ಪರೀಕ್ಷಾ ಕೈ-ಗ್ಲವಸ್, ಆಕ್ಸಿಜನ್ ಸಿಲಿಂಡರ್ ಗಳಲ್ಲಿ ದುಪ್ಪಟ್ಟು ಹಣದ ಲೆಕ್ಕ ತೋರಿಸಿ ಜನರಿಗೆ ಮೋಸ ಮಾಡಿದೆ. ಆದರೆ ಎಲ್ಲಿ ಯಾವ ರೀತಿ ವಿತರಣೆ ನಡದಿದೆ ಎಂಬುದಕ್ಕೆ ಇವರಲ್ಲಿ ಮಾಹಿತಿ ಇಲ್ಲ.
ಇಲ್ಲಿಯವರೆಗೆ ರಾಜ್ಯದಲ್ಲಿ ರೂ. 6.2 ಲಕ್ಷ ಜನರಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿದೆ ಎಂದು ರೂಂ.530 ಕೋಟಿ ಕ್ಲೈಮ್ ಮಾಡಿದೆ. ಸರಕಾರ ನಿಗದಿಪಡಿಸಿದಂತೆ ಒಬ್ಬರಿಗೆ ರೂ 4,000 ಗಳು ಅದರ ಪ್ರಕಾರ ರೂ. 240 ಕೋಟಿ ಆಗಬೇಕು ಆದರೆ ರೂ.530 ಕೋಟಿ ರೂ ಕ್ಲೈಮ್ ಮಾಡಿರುವುದು ಯಾಕೆ ?. ಅದೇ ರೀತಿ ಮಾಹಿತಿ ಕಿಯೋಸ್ಕ್, ಸೋಂಕಿತರ ಖರ್ಚು ಇತ್ಯರ್ಥ, ಇತ್ಯಾದಿ ಹೆಸರುಗಳಿಂದ ಬಹುಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿದೆ.
ಜನತೆ ಆತಂಕದಿಂದ ದಿನ ದೂಡುತ್ತಿರುವ ಕೋವಿಡ್ ಸಂಧಿಗ್ಧತೆ ಯಲ್ಲೂ ದರೋಡೆ ಗೈದ ಈ ಹಗರಣದ ನೈತಿಕ ಹೊಣೆ ಹೊತ್ತು ತಕ್ಷಣ ಕರ್ನಾಟಕ ಅರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಮತ್ತು ಹಗರಣ ದಲ್ಲಿ ಕಂದಾಯ ಸಚಿವ ಆರ್ ಅಶೋಕ್ ರವರ ಹೆಸರು ಕೇಳಿ ಬಂದಿರುವುದರಿಂದ ಅವರ ರಾಜೀನಾಮೆಯನ್ನು ಸಹ ಮುಖ್ಯಮಂತ್ರಿಗಳು ಪಡೆಯಬೇಕು. ಮತ್ತು ಈ ಹಗರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು. ಎಂದು ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.