ಕೊರೊನಾ ಹೆಸರಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ರಾಜ್ಯ ಸರಕಾರ ಕೊರೊನಾ ಹೆಸರಲ್ಲಿ ಲೂಟಿಗಿಳಿದಿದ್ದು ಬರೋಬ್ಬರಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪವನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ದಾಖಲೆಗಳ ಸಮೇತ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಬೇರೆ ಬೇರೆ ಇಲಾಖೆಗಳಿಂದ ಕೊರೋನಕ್ಕಾಗಿ 4,167 ಕೋ.ರೂ. ಖರ್ಚಾಗಿದೆ. ಆದರೆ, ಶ್ರೀರಾಮುಲು ಅವರು 324 ಕೋ.ರೂ. ಖರ್ಚಾಗಿದೆ ಎನ್ನುತ್ತಾರೆ. ಅಶ್ವಥ ನಾರಾಯಣ ಬೇರೆ ಲೆಕ್ಕ ಹೇಳುತ್ತಾರೆ. ಇಲ್ಲಿ ಸುಳ್ಳು ಹೇಳುತ್ತಿರೋದು ಯಾರು ಎಂದು ಪ್ರಶ್ನಿಸಿದ್ದಾರೆ.
ಒಂದು ವೆಂಟಿಲೇಟರ್‍ಗೆ 4 ಲಕ್ಷ ರೂ.ನಂತೆ ಕೇಂದ್ರ ಸರಕಾರ ಖರೀದಿ ಮಾಡಿದೆ. ತಮಿಳುನಾಡು 4.78 ಲಕ್ಷ ರೂ. ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ಆದರೆ ಕರ್ನಾಟಕ ಸರಕಾರ 18 ಲಕ್ಷ ರೂ. ತನಕವೂ ಹಣ ನೀಡಿ ವೆಂಟಿಲೇಟರ್‍ಗಳನ್ನು ಖರೀದಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಕೇಂದ್ರ ಸರಕಾರ 2 ಸಾವಿರ ಕೋಟಿ ಹಣ ಖರ್ಚು ಮಾಡಿ 50 ಸಾವಿರ ವೆಂಟಿಲೇಟರ್ ಖರೀದಿ ಮಾಡಿದ್ದು, ಒಂದಕ್ಕೆ 4 ಲಕ್ಷ ರೂ. ಖರ್ಚು ಮಾಡಿದೆ. ತಮಿಳುನಾಡು 4.78 ಲಕ್ಷ ರೂ.ನಂತೆ 100 ವೆಂಟಿಲೇಟರ್ ಖರೀದಿಸಿದೆ. ರಾಜ್ಯ ಸರಕಾರ ಮಾ.22ರಂದು 5.6 ಲಕ್ಷ ರೂ.ನಂತೆ ವೆಂಟಿಲೇಟರ್ ಖರೀದಿ ಮಾಡಿದೆ. ಅದಾದ ಬಳಿಕ ಮತ್ತೊಮ್ಮೆ 12.32 ಲಕ್ಷ ರೂ.ನಂತೆ ಖರೀದಿ ಮಾಡಿದೆ. ಎಪ್ರಿಲ್ 23ರಂದು 18.23 ಲಕ್ಷ ರೂ.ನೀಡಿ ವೆಂಟಿಲೇಟರ್ ಖರೀದಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.