`ಕೊರೊನಾ ಸೋಂಕಿತ ರೋಗಿಗಳನ್ನು ವಾಪಸ್ ಕಳುಹಿಸುವಂತಿಲ್ಲ’

ಮಂಗಳೂರು:ಖಾಸಗಿ ಆಸ್ಪತ್ರೆಗಳು ಕೋರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡದೆ ಯಾವುದೇ ಕಾರಣಕ್ಕೂ ವಾಪಾಸು ಕಳುಹಿಸುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಿನ್ನೆ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ರೋಗಿಗಳ ನಿರ್ವಹಣೆ ಕುರಿತು ಸಭೆ ನಡೆಸಿ, ಬಳಿಕ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಿರುವಾಗ, ಕೋವಿಡ್ ಸೋಂಕಿತರು ಅಥವಾ ಇತರೆ ಯಾವುದೇ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಲೆದಾಡುವುದನ್ನು ಸರಕಾರ ಸಹಿಸುವುದಿಲ್ಲ. ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಪ್ರವೇಶ ನೀಡಲು ನಿರಾಕರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಸೇರಿದಂತೆ ಚಿಕಿತ್ಸೆಗೆ ಬರುವ ಜನಸಾಮಾನ್ಯರಿಗೆ ಆಯುಷ್ಮಾನ್ ಯೋಜನೆ ಜತೆ ಸಂಯೋಜಿಸಿ ಸರಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಪ್ರತೀ ಕೋವಿಡ್ ಸೋಂಕಿತ ರೋಗಿಗಳ ನಿರ್ವಹಣೆಯ ಮೇಲೆ ನಿಗಾ ಇಡಲಾಗುವುದು ಎಂದು ಸಚಿವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಗೆ 25,000 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಹಾಗೂ 50 ವೆಂಟಿಲೇಟರ್ ಗಳ ಪೂರೈಕೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದ್ದು ಶೀಘ್ರವೇ ಜಿಲ್ಲೆಗೆ ಪೂರೈಕೆಯಾಗಲಿದೆ ಎಂದು ಸಚಿವರು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ್, ಆಸ್ಪತ್ರೆ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *