ಕೊರೊನಾ ಸಂಕಷ್ಟದಲ್ಲೂ ವಸೂಲಿಗಿಳಿದ ಯೇನಪೋಯ ಶಾಲೆ! ಲೋನ್ ಅಫರ್, ಮುಂಬೈ ಸಂಸ್ಥೆಯಿಂದ ಕರೆ!!

ಮಂಗಳೂರು: ಜನರು ಲಾಕ್ ಡೌನ್‍ನಿಂದಾಗಿ ಕೆಲಸ, ವ್ಯವಹಾರ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಯೇನಪೋಯ ಶಾಲಾಡಳಿತ ಮಂಡಳಿ ಮುಂಬೈ ಮೂಲದ ಫೈನಾನ್ಸ್ ಜೊತೆ ಶಿಕ್ಷಣದ ಸಾಲಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದು ಸಂಸ್ಥೆಯಿಂದ ಪೋಷಕರಿಗೆ ನಿರಂತರ ಕರೆ ಬರುತ್ತಿದೆ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.
ಕೊರೊನಾ ಲಾಕ್‍ಡೌನ್ ಆರಂಭದಿಂದ ಇದುವರೆಗೂ ದೇಶದ ಜನರು ಸಂಕಷ್ಟದಿಂದ ಹೊರ ಬಂದಿಲ್ಲ, ಸದ್ಯಕ್ಕೆ ಹೊರಬರುವ ಲಕ್ಷಣವೂ ಕಾಣುತ್ತಿಲ್ಲ. ಬಡ ಮತ್ತು ಮಧ್ಯಮ ವರ್ಗದವರು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದರೆ, ಹಲವು ಕೈಗಳಿಗೆ ಉದ್ಯೋಗವನ್ನು ಕೊಟ್ಟಿರುವ ವಿವಿಧ ಕಂಪೆನಿಗಳ ಮಾಲಕರು, ಜನರ ಸಂಕಷ್ಟ ತೀರಿಸುವ ನಿಟ್ಟಿನಲ್ಲಿ ಊರೂರುಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದು ಇದಕ್ಕಾಗಿ ಲಕ್ಷಗಟ್ಟಲೆ ಹಣ ಸುರಿಸಿದ್ದಾರೆ. ಲಾಕ್‍ಡೌನ್ ಏನಿದ್ದರೂ ಒಂದು ತಿಂಗಳಿರಬಹುದು, ಬಳಿಕ ಎಲ್ಲವೂ ಹಿಂದಿನಂತಾಗಬಹುದು ಎನ್ನುವ ಭಾವನೆ ಇವರದ್ದಾಗಿತ್ತು. ಆದರೆ ಇಂದು ಲಾಕ್‍ಡೌನ್ ಇಲ್ಲದಿದ್ದರೂ ಕೊರೊನಾ ವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಪರಿಸ್ಥಿತಿ ಇನ್ನೂ ಕೆಲವು ತಿಂಗಳು ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ.
ಇದನ್ನು ಮೊದಲೇ ಅರ್ಥೈಸಿಕೊಂಡಿರುವ ಸರ್ಕಾರ ಶಾಲಾರಂಭವನ್ನು ಮುಂದೂಡಿದೆ. ಅಲ್ಲದೆ ಶಾಲಾ ಶುಲ್ಕ ಪಾವತಿಸುವಂತೆ ಪೋಷಕರಿಗೆ ಒತ್ತಡ ಹೇರಬಾರದು ಎನ್ನುವ ಆದೇಶವನ್ನೂ ಹೊರಡಿಸಿದ್ದು, ಇಂಥ ಪ್ರಕರಣಗಳು ಬೆಳಕಿಗೆ ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಯೇನಪೋಯ ಸಂಸ್ಥೆಗಿಲ್ಲವೇ ನಿಯಮ?
ಸರ್ಕಾರ ಯಾವುದೇ ರೀತಿಯ ಆದೇಶ ಜಾರಿಗೆ ತಂದರೂ, ಕ್ರಮದ ಎಚ್ಚರಿಕೆ ನೀಡಿದರೂ ದೊಡ್ಡ ಕುಳಗಳ ಪಾಲಿಗೆ ಅದೆಲ್ಲವೂ ಡೋಂಟ್ ಕ್ಯಾರ್. ಇಂಥ ಡೋಂಟ್ ಕ್ಯಾರ್‍ಗಳ ಸಾಲಿನಲ್ಲಿ ಯೇನಪೋಯ ಶಾಲೆಯೂ ಇದೆ. ಶಾಲಾರಂಭ ಆಗದಿದ್ದರೂ, ಸದ್ಯಕ್ಕೆ ಆಗುವ ಲಕ್ಷಣ ಇಲ್ಲದಿದ್ದರೂ ಸಂಸ್ಥೆ ಮಾತ್ರ ಈಗಲೇ ಶುಲ್ಕ ಕಟ್ಟುವಂತೆ ವರಸೆ ಆರಂಭಿಸಿದೆ. ಪೋಷಕರ ಪರಿಸ್ಥಿತಿ ಹೇಗೆ ಬೇಕಾದರೂ ಇರಲಿ, ತಮ್ಮ ಸಂಸ್ಥೆಯ ತಿಜೋರಿ ತುಂಬಿದರೆ ಸಾಕು ಎನ್ನುವ ಯೋಚನೆ ಸಂಸ್ಥೆಯ ಆಡಳಿತ ಮಂಡಳಿಯದ್ದಾಗಿದೆ. ಅದಕ್ಕಾಗಿ ಹೊಸತೊಂದು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ಸಂಸ್ಥೆ, ಮುಂಬೈ ಮೂಲದ ಫೈನಾನ್ಸ್ ಕಂಪೆನಿಯೊಂದರ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎನ್ನಲಾಗಿದೆ.
ಅದರಂತೆ ಈ ಕಂಪೆನಿ ಶಿಕ್ಷಣಕ್ಕಾಗಿ ಸಾಲ ನೀಡಲಿದ್ದು, ಅದಕ್ಕಾಗಿ ಅಗತ್ಯ ದಾಖಲೆಗಳನ್ನು ಪೋಷಕರು ನೀಡಬೇಕು. ಕೆಲವೊಂದು ಕಂತುಗಳಲ್ಲಿ ಸಾಲ ಮರುಪಾವತಿಸುವ ಆಫರ್ ಇದಾಗಿದ್ದು, ಸಾಲ ಪಡೆಯುವಂತೆ ಕಂಪೆನಿಯಿಂದ ಪೋಷಕರಿಗೆ ಕರೆ ಬರುತ್ತಿದೆ ಎನ್ನುವ ಅಸಮಾಧಾನದ ಮಾತುಗಳು ಕೇಳಿ ಬಂದಿದೆ. ಇದನ್ನು ಗಮನಿಸಿದಾಗ ಯೇನಪೋಯ ಶಾಲೆಗೆ ಬರುವ ಎಲ್ಲ ಮಕ್ಕಳ ಪೋಷಕರ ಸಂಪರ್ಕ ಸಂಖ್ಯೆಯನ್ನು ಫೈನಾನ್ಸ್ ಕಂಪೆನಿಗೆ ನೀಡಲಾಗಿದೆ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.
ಈ ಮೂಲಕ ಯೇನಪೋಯ ಶಿಕ್ಷಣ ಸಂಸ್ಥೆ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಮಕ್ಕಳ ಪೋಷಕರಿಗೆ ಶಿಕ್ಷಣಕ್ಕಾಗಿಯೇ ಜೀವನಪೂರ್ತಿ ಸಾಲಗಾರರನ್ನಾಗಿಸಿ ತಮಗಾಗುವ ನಷ್ಟದಿಂದ ಮುಕ್ತರಾಗುವ ಪ್ಲ್ಯಾನ್ ರೂಪಿಸಿದೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಯಾವುದೇ ಒತ್ತಡ, ಪ್ರಭಾವಕ್ಕೆ ಮಣಿಯದೆ ಸರ್ಕಾರ, ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ಲಾಕ್‍ಡೌನ್ ಸಂಕಷ್ಟದಲ್ಲಿರುವ ಪೋಷಕರಿಗೆ ರಿಲೀಫ್ ನೀಡಬೇಕು ಎನ್ನುವ ಅಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *