ಕೊರೊನಾ ನಿಯಂತ್ರಣಕ್ಕೆ “ಲಾಕ್ ಡೌನ್” ಮಾತ್ರ ದಾರಿಯೇ?

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್ ನಡೆಸುವ ಚಚೆಗಳು ನಡೆಯುತ್ತಿದ್ದು, ಜನಜೀವನವನ್ನು ಕಷ್ಟನಷ್ಟಕ್ಕೆ ದೂಡುವ ಸಾಧ್ಯತೆ ಇದೆ. ಈಗಾಗಲೇ ಆಗಿರುವ ಅನಾಹುತವೇ ಸಾಕಷ್ಟಿರುವಾಗ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿದರೆ ಜನರ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದು ದಂಗೆ ಏಳುವ ಪರಿಸ್ಥಿತಿಯೂ ಉಂಟಾಗ ಬಹುದು. ಇಷ್ಟಕ್ಕೂ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರ ಎನ್ನುವುದು ದೃಢ ಪಟ್ಟಿಲ್ಲ. ಸದ್ಯಕ್ಕೆ ಆಗಬೇಕಾಗಿರುವುದು ಕೊರೊನಾ ಬಗ್ಗೆ ಜಾಗೃತಿ ಮತ್ತು ಇಚ್ಛಾಶಕ್ತಿ.
ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುವುದೇನೋ ನಿಜ. ಅದರ ಜೊತೆಗೆ ಗುಣಮುಖರಾಗುತ್ತಿರು ವವರ ಸಂಖ್ಯೆಯಲ್ಲೂ ಏರಿಕೆಯಾಗು ತ್ತಿರುವುದು ಗಮನಿಸಬೇಕಾದ ಅಂಶ. ಕೊರೊನಾ ನಿಯಂತ್ರಣಕ್ಕೆ ಬಿದ್ದು ಹೈರಾಣಾಗಿ ಹೋಗಿರುವ ಸರಕಾರದ ಎದುರು ಸಮರ್ಥನೀಯವಾದ ಮಾದರಿಯೊಂದಿದೆ. ಅದು ಧಾರಾವಿಯದ್ದು. ಏಶ್ಯಾದ ಅತ್ಯಂತ ದೊಡ್ಡ ಸ್ಲಮ್ ಏರಿಯಾ ಆಗಿರುವ ಧಾರಾವಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದೇ ತಡ, ಮುಂಬೈಯ ಸಾವಿಗೆ ಹೆಚ್ಚಿನ ದಿನಗಳು ಬೇಕಾಗಿಲ್ಲ ಎಂದೆಲ್ಲ ಪ್ರತಿಕ್ರಿಯೆಗಳು ವ್ಯಕ್ತವಾದವು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಧಾರಾವಿ ಮುಂಬೈಯ ಆರ್ಥಿಕ ಶಕ್ತಿಯೂ ಹೌದು. ಇಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುತ್ತವೆ. ದೊಡ್ಡ ದೊಡ್ಡ ಕಂಪೆನಿಗಳ ಬಿಡಿ ಭಾಗಗಳು ಇಲ್ಲಿನ ಪುಟ್ಟ ಪುಟ್ಟ ಮನೆ ಗಳಲ್ಲಿ ತಯಾರಾಗುತ್ತವೆ ಎಂದರೆ ಅದು ಅಚ್ಚರಿಯ ವಿಷಯವೂ ಹೌದು. ಮುಂಬೈಯ ಅಧಿಕಾರಿಗಳು, ಬಾಲಿವುಡ್ ಮಂದಿಯ ಮನೆ ಕೆಲಸಕ್ಕೆ ಇರುವವರು ಹೆಚ್ಚಿನವರು ಧಾರಾವಿಯಿಂದಲೇ ಬಂದವರು. ಜೀವನ ನಿರ್ವಹಣಾ ವೆಚ್ಚ ಕಡಿಮೆ ಎಂಬ ಕಾರಣಕ್ಕೂ ಧಾರಾವಿ ಬಡ, ಮಧ್ಯಮ ವರ್ಗಕ್ಕೆ ಅಚ್ಚುಮೆಚ್ಚು. ಇಂಥ ಧಾರಾವಿಯಲ್ಲಿ ಕೊರೊನಾ ಬಂತೆಂದು ಸಾಮಾಜಿಕ ಅಂತರ ಪಾಲಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ. ಆದರೂ ಧಾರಾವಿಯಲ್ಲಿ ಕೊರೊನಾ ನಿಯಂತ್ರಣ ದಲ್ಲಿರುವುದು ಅಲ್ಲಿನ ಸ್ಥಳೀಯಾ ಡಳಿತ, ಮಹಾರಾಷ್ಟ್ರ ಸರಕಾರದ ಇಚ್ಛಾಶಕ್ತಿಯಿಂದ. ಸಕಾಲಕ್ಕೆ ಪರೀಕ್ಷೆ, ಸೂಕ್ತ ಚಿಕಿತ್ಸೆ, ವಿಶೇಷ ಕಾಳಜಿ, ಕಟ್ಟುನಿಟ್ಟಿನ ಕ್ರಮಗಳಿಂದ ಬೃಹ ನ್ಮುಂಬಯಿ ಮುನಿಸಿಪಲ್ ಕಾರ್ಪೊ ರೇಷನ್ ಏಕಾಏಕಿ ಜಗತ್ತಿನಗಮನ ಸೆಳೆಯಿತು. ಖುದ್ದು ವಿಶ್ವಸಂಸ್ಥೆಯ ಕಾರ‍್ಯದರ್ಶಿಗಳೇ ಧಾರಾವಿಯ ಕೊರೊನಾ ನಿಯಂತ್ರಣದ ಬಗ್ಗೆ ಪ್ರಸ್ತಾಪನೆ ಮಾಡಿದರು. ಅಲ್ಲಿಗೆ ಒಂದು ವಿಷಯ ಖಚಿತವಾಯಿತು. ಕೊರೊನಾ ಗುಣಪಡಿಸಲಾಗದ, ನಿಯಂತ್ರಣ ಮಾಡಲಾಗದ ರೋಗ ಅಲ್ಲ ಎನ್ನುವುದು.
ಹಾಗಿದ್ದರೆ, ಇಡೀ ಆರ್ಥಿಕ ಚಟುವಟಿಕೆಯನ್ನು ಸ್ಥಬ್ದ ಮಾಡುವುದಾದರೂ ಯಾಕೆ? ಜನ ಈಗಾಗಲೇ ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ ಎನ್ನುವುದಕ್ಕೆ ಬ್ಯಾಂಕ್‌ನಲ್ಲಿ ಚಿನ್ನವನ್ನು ಅಡವಿಡುವವರ ಸಂಖ್ಯೆಯಲ್ಲಿ ಅಳೆಯಬಹುದೇನೋ. ಉದ್ಯೋಗ ಇಲ್ಲದ ಮಂದಿ ಕನಿಷ್ಠ ಒಂದು ತುತ್ತಿನ ಊಟ ಮಾಡುವುದಕ್ಕಾದರೂ ಏನು ಮಾಡಬೇಕು? ಲಾಕ್‌ಡೌನ್ ಘೋಷಿಸುವ ಮೊದಲು ಸರಕಾರ ಈ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ತನ್ನ ನಿರ್ಲಕ್ಷ್ಯಕ್ಕೆ ಸರಕಾರ ಜನರನ್ನು ಬಲಿಪಶುಗಳನ್ನಾಗಿ ಮಾಡಬಾರದು. ವಿನಾಕಾರಣ ಕೊರೊನಾದ ಬಗ್ಗೆ ಭೀತಿ ಸೃಷ್ಟಿಸಬಾರದು.
ಲಾಕ್‌ಡೌನ್ ಜೊತೆಜೊತೆಗೆ ಆರ್ಥಿಕತೆ ಸರಾಗವಾಗಿ ಆಗುವಂತೆ ಆಗಬೇಕು. ಅದಕ್ಕಾಗಿ ಸರಕಾರ ತಜ್ಞರ ಸಲಹೆ ಕೇಳಬೇಕು. ಲಾಕ್‌ಡೌನ್ ತಳಮಟ್ಟದ ಜನರಿಂದ ಶ್ರೀಮಂತ ವರ್ಗದ ಜನರನ್ನು ಕಂಗೆಡಿಸುವಂತೆ ಮಾಡಬಾರದು. ಈಗಾಗಲೇ ಆಯುರ್ವೇದ ತಜ್ಞರೊಬ್ಬರು ಕೊರೊನಾವನ್ನು ಆಯುರ್ವೇದ ಔಷಧದಿಂದ ಗುಣಪಡಿಸಿದ್ದೇನೆ ಎಂದು ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದಾರೆ. ಸೋಂಕು ಸಮುದಾಯಿಕವಾಗಿ ಹರಡುವ ಮುನ್ನ ಈ ಔಷಧಿಗಳನ್ನು ಪ್ರಯೋಗಿಸಿದರೆ ತಪ್ಪೇನು? ಜನರಿಗೆ ಪ್ರತಿರೋಧ ಶಕ್ತಿಗಳನ್ನು ಹೆಚ್ಚಿಸುವ ಔಷಧಿಗಳನ್ನು ಉಚಿತವಾಗಿಯೋ, ರಿಯಾಯಿತಿ ದರದಲ್ಲೋ ಕೊಡುವ ವ್ಯವಸ್ಥೆ ಆಗಬೇಕು.
ಸರಕಾರಕ್ಕೇನೋ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕು ಪೀಡಿತರ ಸಂಖ್ಯೆಯನ್ನು ನೋಡಿ ದಿಗಿಲುಗೊಂಡು ಲಾಕ್‌ಡೌನ್‌ನಂತಹ ಕ್ರಮಕ್ಕೆ ಮುಂದಾಗಿರಬಹುದೇನೋ. ಆದರೆ ಇದು ಕೊರೊನಾ ಸೋಂಕನ್ನು ಶಾಶ್ವತವಾಗಿ ಹಿಮ್ಮೆಟ್ಟಿಸುವುದಿಲ್ಲವಲ್ಲ. ಜನ ಈಗ ಕೊರೊನಾಗಿಂತಲೂ ತಮ್ಮ ನಾಳಿನ ಬಗ್ಗೆ ಭಯಬೀಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬದುಕುವುದು ಹೇಗೆ ಎನ್ನುವ ಚಿಂತೆ ಜನರನ್ನು ಮಾನಸಿಕರೋಗಿಗಳನ್ನಾಗಿ ಮಾಡುತ್ತಿದೆ. ಹಿಂದಿನ ಲಾಕ್‌ಡೌನ್ ಸ್ಥಿತಿ ಗಮನಿಸಿದರೆ ಒಂದಂತೂ ಸ್ಪಷ್ಟ. ಸಡಿಲಿಕೆಯ ತಾಸಿನಲ್ಲಿ ಜನ ಅಂಗಡಿ, ಮುಂಗಟ್ಟುಗಳಿಗೆ ಮುಗಿಬಿಟ್ಟು ಕೊರೊನಾ ಸೋಂಕಿತರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ ಅಷ್ಟೇ. ಏನೇ ಇರಲಿ, ಈ ಬಾರಿಯೇನಾದರೂ ಲಾಕ್‌ಡೌನ್ ಆದರೆ ಅದು ಅರ್ಥಿಕ ಚೇತರಿಕೆಗೆ ದಾರಿಯಾಗಿ ಜನರ ಭಯವನ್ನು ಕಡಿಮೆ ಮಾಡಲಿ. ಜೊತೆಗೆ ಕೊರೊನಾದ ಬಗ್ಗೆ ಜಾಗೃತಿಯನ್ನೂ ಹೆಚ್ಚಿಸಲಿ.