ಕೊರೊನಾ ಕರ್ಮಕಾಂಡ: ಚಿಕಿತ್ಸೆ ಹೆಸರಲ್ಲಿ `ಆಕಾಶ್’ ಆಸ್ಪತ್ರೆ’ ಹಗಲು ದರೋಡೆ!

ಬೆಂಗಳೂರು: ಕೊರೊನಾ ಚಿಕಿತ್ಸೆ ಹೆಸರಿನಲ್ಲಿದೇವನಹಳ್ಳಿಯ `ಆಕಾಶ್ ಆಸ್ಪತ್ರೆ' ರೋಗಿಗಳಿಂದ ಲೂಟಿಗಿಳಿದಿದೆ. ಈ ಆಸ್ಪತ್ರೆ ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಜನರಿಗೆ ಸಂಜೀವಿನಿಯೇ ಹೌದು. ಇದನ್ನು ಬಿಟ್ಟರೆ ಬೇರೆ ಅಯ್ಕೆನೇ ಇಲ್ಲ. ಆದರೆ, ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವುದೆಲ್ಲ ಅನಾಚಾರ ಬ್ರಹ್ಮಾಂಡ ಭ್ರಷ್ಟಾಚಾರ. ಈ ಬಗ್ಗೆ ಸಾಕಷ್ಟು ದೂರುಗಳಿವೆ. ಆಸ್ಪತ್ರೆ ಕೋವಿಡ್ ಆಸ್ಪತ್ರೆಗಳ ಲಿಸ್ಟ್‍ನಲ್ಲಿ ಸೇರಿಹೋದ ಮೇಲಂತೂ ಇಲ್ಲಿರುವ ಧನದಾಹಿಗಳ ವಸೂಲಿಬಾಜಿ ಕಂಡು ರೋಗಿಗಳು ತಬ್ಬಿಬ್ಬಾಗುತ್ತಿರುವುದು ದುರಂತ. ಮುನಿರಾಜು ಎನ್ನುವವರ ಮಾಲೀಕತ್ವದ ಈ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳ ವಿಷಯದಲ್ಲಂತೂ ದೊಡ್ಡ ಮಟ್ಟದ ಕ್ರೌರ್ಯವೇ ನಡೆಯುತ್ತಿದೆ. ಕೊರೊನಾ ಪಾಸಿಟಿವ್ ಸೋಂಕಿತರನ್ನು ಈ ಆಸ್ಪತ್ರೆಗೆ ತಂದು ಕೂಡಿಹಾಕಲಾಗುತ್ತಿದೆ. ಆಮೇಲೆ ಅವರು ಸತ್ತಿದ್ದಾರೋ, ಬದುಕಿದ್ದಾರೋ ಎಂದು ನೋಡುವ ಗೋಜಿಗೂ ಹೋಗುವುದಿಲ್ಲ. ಆದರೆ, ದಿನದ ಆಧಾರದಲ್ಲಿ ಬಿಲ್ ಮಾತ್ರ ಹೆಚ್ಚಾಗುತ್ತಲೇ ಇರುತ್ತದೆ. ದೊಡ್ಡ ರೂಮಿನಲ್ಲಿ ಹತ್ತಿಪ್ಪತ್ತು ಸೋಂಕಿತರನ್ನು ಒಟ್ಟಿಗೆ ಅವರಿಗೆ ಊಟ, ತಿಂಡಿ ನೀಡುವುದನ್ನು ಬಿಟ್ಟರೆ ಬೇರೆ ಯಾವುದೇ ವ್ಯವಸ್ಥೆಯನ್ನು ನೀಡಲಾಗುತ್ತಿಲ್ಲ. ಜೀವಭಯದಿಂದ ನಲುಗುತ್ತಿರುವ ಸೋಂಕಿತರನ್ನು ಮತ್ತಷ್ಟು ಭಯಗ್ರಸ್ಥಗೊಳಿಸುವ ವಾತಾವರಣ ಆಸ್ಪತ್ರೆಯಲ್ಲಿದೆ.

ಡಾಕ್ಟರ್ಸ್ ಬರುವುದೇ ಇಲ್ಲ.. ನರ್ಸ್‍ಗಳದ್ದೇ ದರ್ಬಾರ್..!!

ಕೊರೊನಾ ವಿರುದ್ಧ ಸೆಣಸಾಡುವುದಕ್ಕೆ ಸೋಂಕಿತರಿಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಆಹಾರ, ಮಾತ್ರೆ, ಹಣ್ಣು ಹಂಪಲು ನೀಡಬೇಕು. ಆದರೆ, ಈ ಆಸ್ಪತ್ರೆಯಲ್ಲಿ ಮೂರು ಹೊತ್ತು ಊಟ ಕೊಡುವುದನ್ನು ಬಿಟ್ಟರೆ ಇನ್ನೇನೂ ಸಿಗುತ್ತಿಲ್ಲ. ವೈದ್ಯರು ಬರುವುದೇ ಇಲ್ಲ. ಬಂದರೂ ದೂರದಲ್ಲೇ ನಿಂತು ಕೇಸ್ ಚಾರ್ಟ್ ನೋಡಿ ವಾಪಸ್ಸಾಗ್ತಾರೆ. ನರ್ಸ್‍ಗಳದ್ದೇ ರಾಜ್ಯಭಾರ. ಅವರು ಟ್ಯಾಬ್ಲೆಟ್ಸ್ ಕೊಟ್ಟರೆ ಪುಣ್ಯ. ಕೆಲವರಿಗಂತೂ ಯಾವುದೇ ಟ್ಯಾಬ್ಲೆಟ್ ಕೊಡಲಾಗುತ್ತಿಲ್ಲ. ಹಠ ಮಾಡಿದರೂ ಬೈಗುಳಗಳ ಅಭಿಷೇಕವೇ ನಡೆದೋಗುತ್ತದೆ. ಸೋಂಕಿತರನ್ನು ಅಕ್ಷರಶಃ ಪಶುಗಳಂತೆ ಟ್ರೀಟ್ ಮಾಡಲಾಗುತ್ತಿದೆ. ಚಿಕಿತ್ಸೆಯೇ ನೀಡಲಾಗುತ್ತಿಲ್ಲ. ಬೆಡ್ ಮೇಲೆ ದಿನ ದೂಡುವುದಕ್ಕಷ್ಟೇ ಸೋಂಕಿತರನ್ನು ತಂದು ಕೂಡಿಹಾಕಲಾಗುತ್ತಿದೆ. ಕಾಮನ್ ರೂಂ-ಬೆಡ್ ಗಳ ಕಥೆ ಹೀಗಾದರೆ ನಾಮ್ ಕಾ ವಾಸ್ತೇಗೆಂದು ಇರುವ ಲಕ್ಸುರಿ, ಸೆಮಿ ಲಕ್ಸುರಿ ಬೆಡ್‍ಗಳದ್ದು ಮತ್ತೊಂದು ರೀತಿಯ ಲೂಟ್ ಕಥೆ. ಒಂದು ಸಣ್ಣ ರೂಮಿನಲ್ಲಿ ನಾಲ್ಕು ಮಂಚ ಹಾಕಿ ಅದನ್ನೇ ಸ್ಪೆಷಲ್ ವಾರ್ಡ್ ಎಂದ್ಹೇಳಿ ಸೋಂಕಿತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಪ್ರಶ್ನಿಸಿದರೆ, ಇದೇನ್ ಧರ್ಮಛತ್ರ ಅಂದ್ಕೊಂಡಿದ್ದೀರಾ? ಇಷ್ಟವಿದ್ದರೆ ಇರಿ ಇಲ್ಲವಾದ್ರೆ ಚಾರ್ಜ್ ಕಟ್ಟಿ ಹೊರಹೋಗಿ ಎಂದೆಲ್ಲಾ ಧಮ್ಕಿ ಮಾತುಗಳನ್ನಾಡುತ್ತಿದ್ದಾರೆ.

ಜನಜಾಗೃತಿ ಪ್ರತಿಷ್ಠಾನದಿಂದ ಸರ್ಕಾರಕ್ಕೆ ದೂರು!

ಹಣ ಮಾಡುವುದಕ್ಕೆಂದೇ ಕೋವಿಡ್ ಆಸ್ಪತ್ರೆಯ ಲಿಸ್ಟ್‍ನಲ್ಲಿ ತನ್ನ ಆಸ್ಪತ್ರೆಯನ್ನು ಸೇರಿಸಿಕೊಂಡಿರುವ ಮುನಿರಾಜ್ ಮಾತೆತ್ತಿದ್ದರೆ ಬಿಬಿಎಂಪಿ ಕಮಿಷನರ್‍ನನ್ನ ಜೇಬಿನಲ್ಲಿದ್ದಾರೆ. ದೇವನಹಳ್ಳಿ ಎಂಎಲ್ ಎ ನಾನು ಹೇಳಿದ ಮಾತನ್ನು ಮೀರುವುದಿಲ್ಲ ಎಂದು ಅಹಂಕಾರದ ಮಾತನ್ನಾಡುತ್ತಾರಂತೆ. ಆಸ್ಪತ್ರೆಯನ್ನು ಲೂಟಿಯ ಕೇಂದ್ರವನ್ನಾಗಿಸಿಕೊಂಡಿರುವ ಮುನಿರಾಜ್ ವಿರುದ್ಧ ಸಾಕಷ್ಟು ದೂರುಗಳಿದ್ದರೂ ಬಿಬಿಎಂಪಿ ಕಮಿಷನರ್ ಇವರ ವಿರುದ್ದ ಏಕೆ ಕ್ರಮ ಕೈಗೊಳ್ಳುತ್ತಿಲ್ಲವೋ ಗೊತ್ತಾಗ್ತಿಲ್ಲ. ಇದೆಲ್ಲವನ್ನು ಪರಿಗಣಿಸಿಯೇ ಇದೀಗ ಜನಜಾಗೃತಿ ಪ್ರತಿಷ್ಠಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಕೊಡಲು ಮುಂದಾಗಿದೆ. ಉದ್ಯಮಿ ಮುನಿರಾಜ್ ದಂಧೆ ಮಾಡುವುದಿದ್ದರೆ ಅದಕ್ಕೆ ಬೇರೆ ಮಾರ್ಗಗಳಿವೆ. ಅದಕ್ಕೆ ಆಸ್ಪತ್ರೆಯನ್ನೇ ನಡೆಸುವ ಅವಶ್ಯಕತೆ ಇಲ್ಲ. ಅದರಲ್ಲೂ ಕೊರೊನಾ ಸಮಯದಲ್ಲಂತೂ ಇಲ್ಲವೇ ಇಲ್ಲ. ಈ ಘನಂದಾರಿ ಮನುಷ್ಯನ ಎಂಜಿಲ ಕಾಸಿಗೆ ನಿಯತ್ತು ಮಾರಿಕೊಂಡು ಆಸ್ಪತ್ರೆಯ ಕೊರೊನಾ ಕರ್ಮಕಾಂಡವನ್ನು ಮುಚ್ಚಿ ಹಾಕುವ ಕೆಲಸ ಬಿಬಿಎಂಪಿನೂ ಮಾಡಬಾರದು ಎನ್ನುವುದು`ಜಯಕಿರಣ’ ಕಳಕಳಿ.

Leave a Reply

Your email address will not be published. Required fields are marked *