ಕೊನೆಗೂ ಐಪಿಎಲ್‍ಗೆ ಮುಹೂರ್ತ ನಿಗದಿ

ದೆಹಲಿ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಐಪಿಎಲ್-2020ಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಕ್ರಿಕೆಟ್ ಪ್ರಿಯರಲ್ಲಿ ಸಂತಸ ತಂದಿದೆ. 2020ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ನವೆಂಬರ್ 8ರಂದು ಫೈನಲ್ ನಡೆಯಲಿದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ. ಸದ್ಯ ಬಿಸಿಸಿಐ ಕೇಂದ್ರ ಸರ್ಕಾರದ ಅಂತಿಮ ನಿರ್ಧಾರದ ನಿರೀಕ್ಷೆಯಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಐಪಿಎಲ್ ನಡೆಯುವ ಸ್ಥಳ ಹಾಗೂ ವೇಳಾಪಟ್ಟಿ ಗೊತ್ತಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟೂರ್ನಿಯ ಕುರಿತ ಅಂತಿಮ ವಿವರಗಳನ್ನು ಹಾಗೂ ವೇಳಾಪಟ್ಟಿಯನ್ನು ಅನುಮೋದಿಸಲು ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಸಲಾಗುತ್ತದೆ. ಬಿಸಿಸಿಐ ಟೂರ್ನಿ ಯೋಜನೆಯ ಬಗ್ಗೆ ಅನೌಪಚಾರಿಕವಾಗಿ ಈಗಾಗಲೇ ಐಪಿಎಲ್ ಫ್ರಾಂಚೈಸಿಗಳಿಗೆ ತಿಳಿಸಿದೆ ಎಂಬ ಮಾಹಿತಿ ಲಭಿಸಿದೆ. ಶೀಘ್ರವೇ ಆಡಳಿತ ಸಮಿತಿ ಸಭೆ ಕರೆದು ವೇಳಾಪಟ್ಟಿಯನ್ನು ಫೈನಲ್ ಮಾಡಲಾಗುವುದು. ಟೂರ್ನಿ ಸೆ.19 ರಿಂದ ನ.8ರ ವರೆಗೂ ನಡೆಯಲಿದೆ. ಸರ್ಕಾರ ಅನುಮತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಸುದ್ದಿ ಸಂಸ್ಥೆ ಪಿಟಿಐ ಮಾಧ್ಯಮಕ್ಕೆ ತಿಳಿಸಿದ್ದಾರೆ. ಐಸಿಸಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಅವಧಿಯಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಟೂರ್ನಿಯನ್ನು ಮುಂದೂಡಿದ ವೇಳೆಯೇ ಐಪಿಎಲ್ ಟೂರ್ನಿ ನಡೆಯುವುದು ಖಚಿತವಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಉಳಿದಂತೆ ಟೂರ್ನಿಯಲ್ಲಿ 5 ಡಬಲ್ ಶೆಡ್ಯೂಲ್ ಪಂದ್ಯಗಳು ಮಾತ್ರ ನಡೆಯುವ ಅವಕಾಶವಿದೆ. ಆದರೆ ಈ ಬಾರಿಯ ಐಪಿಎಲ್‍ನ ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

Leave a Reply

Your email address will not be published. Required fields are marked *