ಕೊಡಗಿನಲ್ಲಿ ಹೋಂಸ್ಟೇ ರೆಸಾರ್ಟ್ ಬಂದ್‍ಗೆ ಜಿಲ್ಲಾಧಿಕಾರಿ ಆದೇಶ

ಮಡಿಕೇರಿ: ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ದಾಖಲಾಗುತಿದ್ದು, ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಕೊಡಗಿನಲ್ಲೂ ಕೂಡ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಠಿಣ ಕ್ರಮ ತೆಗೆದುಕೊಂಡಿದ್ದು, ಹೋಂಸ್ಟೇ ರೆಸಾರ್ಟ್ ಬಂದ್ ಮಾಡುವಂತೆ ಆದೇಶ ಮಾಡಿದ್ದಾರೆ.
ಲಾಕ್ ಡೌನ್ ತೆರವು ಮಾಡಿದ ಬಳಿಕ ಇತ್ತೀಚೆಗಷ್ಟೇ ಅಂದರೆ ಜೂನ್ 8ರ ಬಳಿಕ ಹೋಂಸ್ಟೇ ರೆಸಾರ್ಟ್ ತೆರೆಯಲಾಗಿತ್ತು. ಆದರೆ ಬಳಿಕ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಮತ್ತೆ ಬರಲಾರಂಭಿಸಿದ್ದರು. ಇದರಿಂದ ಆಕ್ರೋಶಿತರ ನಾಗರಿಕರು ಮೊನ್ನೆ ಸೋಮವಾರಪೇಟೆಯಲ್ಲಿ ಪ್ರವಾಸಿಗರ ಕಾರ್‍ಗಳನ್ನು ವಾಪಸ್ ಹೋಗುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಈಚೆಗಷ್ಟೇ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ತೀವ್ರಗೊಳ್ಳುತ್ತಿದ್ದು, ನೂರರ ಗಡಿ ಸಮೀಪಿಸಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೋಂಸ್ಟೇ, ರೆಸಾರ್ಟ್‍ಗಳು ಇಂದಿನಿಂದಲೇ ಬಂದ್ ಮಾಡುವಂತೆ ಆದೇಶ ಮಾಡಿದ್ದಾರೆ. ಈಗಾಗಲೇ ಹೋಂಸ್ಟೇ ರೆಸಾರ್ಟಿನಲ್ಲಿ ಪ್ರವಾಸಿಗರು ಇದ್ದರೆ, ಅವರ ಬುಕಿಂಗ್ ಅವಧಿ ಮುಗಿಯುತ್ತಿದ್ದಂತೆಯೇ ವಾಪಸ್ ಕಳುಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಹೊಸ ಬುಕಿಂಗ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ನಿಯಮ ಮುಂದಿನ ಆದೇಶದವರೆಗೆ ಅನ್ವಯ ಆಗಲಿದ್ದು, ಉಲ್ಲಂಘನೆ ಆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *