ಕುಡ್ಲದ `ನೀರ್ ದೋಸೆ’ಗೆ ಕೊಹ್ಲಿ ಫಿದಾ!

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‍ನ ಸದ್ಯ ಫಿಟ್ಟೆಸ್ಟ್ ಆಟಗಾರ ಎಂಬ ಖ್ಯಾತಿ ಪಡೆದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಹಾರದ ವಿಚಾರದಲ್ಲಿ ಕೊಂಚ ಕಡಿಮೆಯೇ ಆಸಕ್ತಿ ತೋರುತ್ತಾರೆ. ಆದರೆ ಅಚ್ಚರಿ ಎಂಬಂತೆ ಕೊಹ್ಲಿಗೆ, ಸಹಆಟಗಾರ ಶ್ರೇಯಸ್ ಅಯ್ಯರ್‍ರ ತಾಯಿ ಮಾಡುವ ಮಂಗಳೂರು ನೀರ್ ದೋಸೆ ಬಹಳ ಇಷ್ಟವೆಂದು ಸ್ವತಹ ಅವರೇ ಬಹಿರಂಗ ಪಡಿಸಿದ್ದಾರೆ.
ಕೊಹ್ಲಿಯ ಮುಂಬೈ ಫ್ಲ್ಯಾಟ್‍ನ ಸುಮಾರು 500 ಮೀ. ದೂರದಲ್ಲೇ ಶ್ರೇಯಸ್ ಕೂಡ ಫ್ಲ್ಯಾಟ್ ಹೊಂದಿದ್ದಾರೆ. ನಿನ್ನೆ (ಬುಧವಾರ) ಕೊಹ್ಲಿ ಮನೆಗೆ ಶ್ರೇಯಸ್ ತನ್ನ ತಾಯಿ ಮಾಡಿದ ಮಂಗಳೂರು ನೀರ್ ದೋಸೆ ಜೊತೆ ತೆರಳಿದ್ದರು. ಇದರ ರುಚಿ ನೋಡಿ ಕೊಹ್ಲಿ ಅತೀವ ಸಂತಸಗೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇಂಥ ಉತ್ತಮ ನೀರ್ ದೋಸೆ ನೀಡಿದ ಶ್ರೇಯಸ್ ತಾಯಿಗೆ ದೊಡ್ಡ ಧನ್ಯವಾದ. ಬಹಳ ಸಮಯದ ನಂತರ ಇಂಥ ರುಚಿಕರ ದೋಸೆ ತಿಂದಿದ್ದೇನೆ. ಬಹುಷಃ ನಾನು ಕಳುಹಿಸಿದ ಅಣಬೆ ಬಿರಿಯಾನಿ ನಿಮಗೆ (ಶ್ರೇಯಸ್ ತಾಯಿ) ಇಷ್ಟವಾಗಿರಬಹುದು ಎಂದು ಕೊಹ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‍ಗೆ ಕಮೆಂಟ್ ಮಾಡಿರುವ ಮತ್ತೊಬ್ಬ ಟೀಮ್ ಇಂಡಿಯಾ ಆಟಗಾರ ಯಜುವೇಂದ್ರ ಚಹಲ್, ಕೊಹ್ಲಿ ಅಣ್ಣಾ ನನಗೂ ಕೂಡ ಅಣಬೆ ಬಿರಿಯಾನಿ ಕಳುಹಿಸಿ, ನನ್ನ ಮನೆ ಕೇವಲ 1400 ಕಿ.ಮೀ ದೂರದಲ್ಲಿದೆ ಎಂದು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *