ಕುಖ್ಯಾತ ಬೈಕ್ ಕಳವು ಜಾಲ ಬೆಳಕಿಗೆ: ಐವರ ಸೆರೆ

ಬೆಳ್ತಂಗಡಿ : ಬೆಳ್ತಂಗಡಿ ಸುತ್ತ ಮುತ್ತ ನಿರಂತರ ಬೈಕ್ ಕಳವು ನಡೆಯುತ್ತಿದ್ದು ಈ ಬಗ್ಗೆ ಕಾರ್ಯಾಚರಣೆಗಿಳಿದ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂಎಂ ಮತ್ತು ಸಿಬ್ಬಂದಿಯವರು ನಿನ್ನೆ ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸಿ ಐವರು ಬೈಕ್ ಕಳವು‌ ಆರೋಪಿಗಳನ್ನು ಬಂಧಿಸಿದ್ದಾರೆ.

ಸುರತ್ಕಲ್ ಕಾನ ನಿವಾಸಿ ವಿಜಯ ಯಾನೆ ಆಂಜನೇಯ (23), ಉಳಾಯಿಬೆಟ್ಟು ನಿವಾಸಿ ಪ್ರದೀಪ್@ ಚೇತನ್@ ಪ್ರದಿ (27), ಬಂಟ್ವಾಳದ ಬಾಳೆಪುಣಿ‌ ಪೂಪಾಡಿಕಲ್ಲು ನಿವಾಸಿ ಸುದೀಶ್ ಕೆಕೆ@ ಮುನ್ನ (20), ಉಜಿರೆ ಲಾಯಿಲದ ಕುಂಟಿನಿ ನಿವಾಸಿ ಮೋಹನ@ ಪುಟ್ಟ (21) ಹಾಗೂ ನಿತಿನ್ ಕುಮಾರ್ (22) ಬಂಧಿತ ಆರೋಪಿಗಳು.

ಎರಡು ಬೈಕಲ್ಲಿ ಬಂದಿದ್ದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆಗೊಳಪಡಿಸಿದಾಗ ಇತ್ತೀಚೆಗೆ ಬೆಳ್ತಂಗಡಿ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆಯಿಂದ ಮತ್ತು ಮೂಡಬಿದಿರೆ ಠಾಣಾ ವ್ಯಾಪ್ತಿಯಿಂದ ಕಳವು ಮಾಡಿರುವ ಬೈಕ್ ಎಂಬುದಾಗಿ ತಿಳಿದುಬಂದಿದೆ.

ಈ ಆರೋಪಿಗಳು ಉಜಿರೆ ಕುಂಟಿನಿಯ ಇನ್ನಿಬ್ಬರು ಶಾಮೀಲಾಗಿರುವ ಬಗ್ಗೆ ತಿಳಿಸಿದಂತೆ ಸಿಬ್ಬಂದಿಯವರು ಮತ್ತೆರಡು ಬೈಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಇವರಿಂದ 4 ಬೈಕ್, ಕಳವಿಗೆ ಬಳಸಿದ ಓಮ್ನಿ ಕಾರು ವಶಪಡಿಸಿದ್ದು ಇದರ ಒಟ್ಟುಮೌಲ್ಯ ಮೂರು ಲಕ್ಷ ಅರುವತ್ತ ಮೂರು ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಎಸ್ ಡಿ ಎಂ ಕಲಾ ಭವನದ ಮುಂಭಾಗದ ಮನೆ ,ಮದ್ದಡ್ಕ, ಉಜಿರೆ ಸಾಯಿರಾಂ ಪ್ಲ್ಯಾಟ್ ಬಳಿಯ ಹಾಗೂ ಮೂಡಬಿದಿರೆ ಬಳಿಯಿಂದ ಕಳವು ಮಾಡಿರುವ ವಾಹನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕೋವಿಡ್ 19 ಕೊರೋನ ವೈರಸ್ ತಡೆಗಟ್ಟುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಬೆಳ್ತಂಗಡಿ ಪೊಲೀಸರಿಗೆ ಮಳೆಗಾಲದ ಕಳವು ಕೂಡ ಸವಾಲಾಗಿತ್ತು.ಕೊರೋನ ವೈರಸ್ ಮುಂಜಾಗ್ರತಾ ಕ್ರಮದೊಂದಿಗೆ ಬೆಳ್ತಂಗಡಿ ಪೊಲೀಸರು ಐದು ಜನ ಕಳ್ಳರ ಜಾಲವನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿ ಆತಂಕದಲ್ಲಿದ್ದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ಭರವಸೆ ಮೂಡುವಂತಾಗಿದೆ.

ಈ ಕಾರ್ಯಾಚರಣೆಯು ಎಸ್‌ಪಿ ಲಕ್ಷ್ಮೀ ಪ್ರಸಾದ್ ಬಿಎಂ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಕ್ರಂ ಆಮ್ಟೆ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿಜಿ ರವರ ಆದೇಶದಂತೆ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂಎಂ ರವರ ನೇತೃತ್ವದಲ್ಲಿ ಪ್ರೊ.ಪಿಎಸ್ಐ ಶರತ್ ಕುಮಾರ್, ಎಎಸ್ಐಗಳಾದ ದೇವಪ್ಪ ಎಂಕೆ, ಕೆಜೆ ತಿಲಕ್, ಸಿಬ್ಬಂದಿ ಲಾರೆನ್ಸ್ ಪಿಆರ್, ಇಬ್ರಾಹಿಂ ,ಅಶೋಕ್, ಚರಣ್ ರಾಜ್, ವೆಂಕಟೇಶ್, ಬಸವರಾಜ್ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *