`ಕಷಾಯ ಕುಡಿಯುತ್ತಾ ಟೈಂ ವೇಸ್ಟ್ ಮಾಡ್ಬೇಡಿ, ಕೊರೊನಾ ಟೆಸ್ಟ್ ಮಾಡಿಸಿ’

ಉಡುಪಿ: ಕೊರೊನಾ ಲಕ್ಷಣಗಳೇನಾದರೂ ನಿಮಗೆ ಕಂಡುಬಂದಲ್ಲಿ ಮನೆಯಲ್ಲೇ ಕಷಾಯ ಕುಡಿಯುತ್ತಾ ಟೈಂ ವೇಸ್ಟ್ ಮಾಡ್ಬೇಡಿ, ತಕ್ಷಣ ಫೀವರ್ ಕ್ಲಿನಿಕ್ ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಸಂದೇಶದಲ್ಲಿ ಜನರಿಗೆ ಮನವಿ ಮಾಡಿರುವ ಡಿಸಿ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಸಾವಿನ ಪ್ರಮಾಣ ಮತ್ತು ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳವಾಗಿದೆ. ರೋಗ ಲಕ್ಷಣವಿದ್ದವರು ಕೊನೆಗೆ ಆಸ್ಪತ್ರೆಗೆ ಭೇಟಿ ನೀಡುವ ಕಾರಣ ಅವರನ್ನು ಬದುಕಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಸೋಂಕಿನ ಸಣ್ಣ ಲಕ್ಷಣ ಕಂಡುಬಂದರೂ ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಉಡುಪಿ ಜಿಲ್ಲೆಯಲ್ಲಿ ಉಚಿತ ಕೊರೊನಾ ಟೆಸ್ಟ್ ಮಾಡಲಾಗುತ್ತದೆ, ಉಚಿತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದು ಡಿಸಿ ಹೇಳಿದ್ದಾರೆ.
ಕೆಮ್ಮು, ಶೀತ, ಜ್ವರ, ಗಂಟಲುನೋವು ಕಂಡುಬಂದರೆ ತಕ್ಷಣ ಫೀವರ್ ಕ್ಲಿನಿಕ್ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಮಾತ್ರೆ ತಿನ್ನುತ್ತಾ, ಕಷಾಯ ಕುಡಿಯುತ್ತಾ ಮನೆಯಲ್ಲೇ ಇರಬೇಡಿ. ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಸೋಂಕಿನ ಲಕ್ಷಣ ಇಲ್ಲದವರಿಗೆ, ಇರುವವರಿಗೆ, ವೆಂಟಿಲೇಟರ್, ಆಕ್ಸಿಜನ್ ಸಹಿತ ಐಸಿಯುನಲ್ಲಿ ಚಿಕಿತ್ಸೆ ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಡಿಸಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೃದಯ ಸಂಬಂಧಿ ರೋಗ, ಕ್ಯಾನ್ಸರ್, ಕಿಡ್ನಿ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದವರು ಸಾವನ್ನಪ್ಪಿದ್ದಾರೆ. ಇವರೊಂದಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ವಯಸ್ಕರೂ ಸಾವನ್ನಪ್ಪಿದ್ದು ಜನರು ತಮ್ಮ ಜೊತೆಯಲ್ಲಿ ಮನೆಮಂದಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
Hospital nalli corono fix madtharea nimgea gothilwa