ಕಠಿಣ ಪರಿಸ್ಥಿತಿಯಲ್ಲಿ ತಂಡ ಕಟ್ಟಿದ್ದ ಗಂಗೂಲಿ?

ಮುಂಬೈ: ಎಮ್‍ಎಸ್ ಧೋನಿ ಬಹಳಷ್ಟು ಟ್ರೋಫಿಗಳನ್ನು ಗೆದ್ದಿರಬಹುದು, ಆದರೆ ಕಷ್ಟಕರ ಸಂದರ್ಭದಲ್ಲಿ ಸೌರವ್ ಗಂಗೂಲಿ ತಂಡ ಕಟ್ಟಿದ್ದರು. ಧೋನಿ ಅವರಿಗಿಂತ ಸೌರವ್ ಗಂಗೂಲಿ ಬಹಳ ಪರಿಣಾಮಕಾರಿ ನಾಯಕ ಎಂದು ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಪಾರ್ಥಿವ್ ಪಟೇಲ್, ಇಬ್ಬರು ನಾಯಕರ ನಡುವೆ ಸ್ಪರ್ಧೆಯು ಮಾನ್ಯವಾಗಿರುತ್ತದೆ. ಇದರಲ್ಲಿ ಒಬ್ಬ ನಾಯಕ ಐಸಿಸಿಯ ಎಲ್ಲ ಟ್ರೋಫಿಗಳನ್ನು ಗೆದ್ದಿದ್ದರೆ, ಇನ್ನೊಬ್ಬ ನಾಯಕ ಕಷ್ಟದ ಕಾಲದಲ್ಲಿ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಧೋನಿ ಅವರು ಟ್ರೋಫಿಗಳನ್ನು ಗೆದ್ದಿರಬಹುದು ಆದರೆ ತಂಡ ಕಟ್ಟಿದ್ದು ದಾದಾ. 2000ರ ನಂತರ ಸೌರವ್ ಗಂಗೂಲಿ ನಾಯಕರಾದಾಗ, ಭಾರತೀಯ ಕ್ರಿಕೆಟ್ ತಂಡ ಕಠಿಣ ಸಮಯವನ್ನು ಎದುರಿಸುತ್ತಿತ್ತು. ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ವಿದೇಶದಲ್ಲಿ ಸರಣಿ ಗೆಲ್ಲುವಂತ ತಂಡವನ್ನು ಗಂಗೂಲಿಯವರು ಕಟ್ಟಿ ಬೆಳೆಸಿದರು. ನಾವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದೆವು. ಜೊತೆಗೆ ಪಾಕಿಸ್ತಾನಕ್ಕೆ ಹೋಗಿ ಟೆಸ್ಟ್ ಸರಣಿಯನ್ನು ಗೆದ್ದಿದ್ದೇವೆ. ಈ ತಂಡವನ್ನು ಕಟ್ಟಿದ್ದು, ಗಂಗೂಲಿಯವರ ನಾಯಕತ್ವದಲ್ಲಿ. ದಕ್ಷಿಣ ಆಫ್ರಿಕಾದಲ್ಲಿ 2003ರ ವಿಶ್ವಕಪ್‍ನಲ್ಲಿ ಭಾರತ ತಂಡವು ಫೈನಲ್ ತಲುಪುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಆದರೆ ಅಂದು ನಾವು ಫೈನಲ್ ಪ್ರವೇಶ ಮಾಡಿದ್ದೆವು. ಧೋನಿ ಎಲ್ಲ ಟ್ರೋಫಿ ಗೆದ್ದರು, ನನಗೆ ತಂಡವನ್ನು ಕಟ್ಟಿ ಬೆಳಸಿದ ಗಂಗೂಲಿಯವರು ಇಷ್ಟ ಆಗುತ್ತಾರೆ ಎಂದು ತಿಳಿಸಿದ್ದಾರೆ. ಭಾರತದ ಕ್ರಿಕೆಟ್ ನಾಯಕತ್ವದ ವಿಚಾರಕ್ಕೆ ಬಂದರೆ ಇಬ್ಬರು ದಿಗ್ಗಜ ಕ್ಯಾಪ್ಟನ್‍ಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ನಾಯಕರಾಗಿ ಎಂಎಸ್ ಧೋನಿ ಮತ್ತು ಸೌರವ್ ಗಂಗೂಲಿಯವರು ಭಾರತ ತಂಡಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಎಂಎಸ್ ಧೋನಿಯವರು ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ತಂಡವನ್ನು ಗೆಲ್ಲಿಸಿದರೆ, ಗಂಗೂಲಿಯವರು ಕಷ್ಟದ ಕಾಲದಲ್ಲಿ ತಂಡವನ್ನು ಕಟ್ಟಿ ವಿದೇಶದಲ್ಲಿ ಸರಣಿಗಳನ್ನು ಗೆದ್ದು ತಂದಿದ್ದರು. ಧೋನಿಯವರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. 2007ರ ಚೊಚ್ಚಲ ಟಿ-20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ಅವರ ನಾಯಕ್ವದಲ್ಲಿ ಗೆದ್ದಿತ್ತು. ಆದರೆ 2007ರ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‍ನಲ್ಲಿ ಆಡಿದ ಪ್ರಮುಖ ಆಟಗಾರರು ಗಂಗೂಲಿಯವರ ಗರಡಿಯಲ್ಲಿ ಪಳಗಿದ ಆಟಗಾರರು, ಈ ಆಟಗಾರರು ತಂಡದಲ್ಲಿ ಇದ್ದ ಕಾರಣ ಧೋನಿ ಟ್ರೋಫಿಗಳನ್ನು ಗೆದಿದ್ದಾರೆ ಎಂದು ಕೆಲವರು ವಾದಿಸುತ್ತಾರೆ.

Leave a Reply

Your email address will not be published. Required fields are marked *