ಉ.ಕ. ಜಿಲ್ಲೆಯಲ್ಲಿ ಕೊರೊನಾಕ್ಕೆ ಮೊದಲ ಬಲಿ!

ಕಾರವಾರ: ಯಲ್ಲಾಪುರದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದ ವೃದ್ಧೆಯೊಬ್ಬರು ನಿನ್ನೆ ಮೃತಪಟ್ಟಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮೊದಲ ಬಲಿ ಪಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ವೃದ್ಧೆಗೆ ಸೋಂಕು ತಗಲಿತ್ತು ಎಂದು ಜಿಲ್ಲಾಡಳಿತ ದೃಢಪಡಿಸಿದೆ.
ಮೊದಲ ಪರೀಕ್ಷೆಯಲ್ಲಿ ಇವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಆದರೆ ವರದಿಯಲ್ಲಿ ತಪ್ಪಾಗಿದೆ ಎಂದು ಭಾವಿಸಿ, ಎರಡನೇ ಬಾರಿಗೆ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡನೇ ವರದಿ ಬರುವುದರೊಳಗೆ ವೃದ್ಧೆ ಮೃತಪಟ್ಟಿದ್ದು ಮಾರ್ಗಸೂಚಿಯಂತೆ ಅಂತಿಮ ಸಂಸ್ಕಾರ ನಡೆಸಲಾಗಿತ್ತು. ಇಂದು ಬೆಳಿಗ್ಗೆ ಬಂದ ದ್ವಿತೀಯ ವರದಿಯಲ್ಲಿ ವೃದ್ಧೆಯಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದೆ. ಹೊನ್ನಾವರ ಮೂಲದ 60 ವರ್ಷದ ವೃದ್ಧೆ ಪತಿಯೊಂದಿಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಪತಿ ಅನಾರೋಗ್ಯದ ನಿಮಿತ್ತ ಮೃತಪಟ್ಟ ಕಾರಣ ಇವರನ್ನು ಸೊಸೆಯ ಮನೆಯಾದ ಯಲ್ಲಾಪುರಕ್ಕೆ ಖಾಸಗಿ ಕಾರಿನಲ್ಲಿ ಕರೆತರಲಾಗಿತ್ತು. ಪತಿಗೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸದೇ ಅಂತಿಮ ಸಂಸ್ಕಾರ ನಡೆಸಲಾಗಿತ್ತು ಎಂದು ಹೇಳಲಾಗಿದೆ.

(ಸಾಂದರ್ಭಿಕ ಚಿತ್ರ)

Leave a Reply

Your email address will not be published. Required fields are marked *