ಉಸ್ತುವಾರಿ ಸಚಿವರು ಹೇಳಿದ್ದೇನು… ಆಗ್ತಾ ಇರೋದೇನು? ಸಚಿವರೇ ಜನರ ಸಂದೇಹ ನಿವಾರಿಸುವಿರಾ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿಗೆ ಉಚಿತ ಚಿಕಿತ್ಸೆ. ಆ ಕಾರ್ಡ್ ಈ ಕಾರ್ಡ್ ಏನೂ ಬೇಡ ಬರೀ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದೇ ತಡ ಜಿಲ್ಲೆಯ ಜನರು ಸಂತಸಪಟ್ಟರು. ನಿಜವಾದ ಜನನಾಯಕ ಎಂದು ಕೋಟರನ್ನು ಹೊಗಳಿದ್ದ ಪೋಸ್ಟ್ ಗಳು ಸೋಷಿಯಲ್ ಮೀಡಿಯಾ ತುಂಬಾ ಹರಿದಾಡಿದವು. ಆದರೆ ಎರಡೇ ದಿನಗಳಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಬಣ್ಣ ಮತ್ತೆ ಬಯಲಾಗಿದೆ. ಕೊರೋನಾ ಸೋಂಕಿತರಿಂದ ಲಕ್ಷಾಂತರ ರೂಪಾಯಿ ಬಿಲ್ ಪೀಕಿಸುತ್ತಿರುವ ಆಸ್ಪತ್ರೆಗಳು ಜನರನ್ನು ದೋಚುತ್ತಿದ್ದರೆ ಉಸ್ತುವಾರಿ ಜನರ ಸಂದೇಹ ನಿವಾರಿಸುವವರಾರು ಎಂದು ಪ್ರಶ್ನೆ ಎದ್ದಿದೆ.
ಕೊರೋನಾ ಸೋಂಕಿತರ ಚಿಕಿತ್ಸೆಗೆ ದಿನವೊಂದಕ್ಕೆ ಲಕ್ಷದ ಹತ್ತಿರತ್ತಿರ ಬಿಲ್ ಮಾಡುವ ಖಾಸಗಿ ಆಸ್ಪತ್ರೆಗಳ ಬಗ್ಗೆ ದಿನಕ್ಕೆ ನೂರು ದೂರುಗಳು ಬರುತ್ತಿವೆ. ಸಾಮಾನ್ಯ ಜ್ವರಕ್ಕೂ ಕೊರೋನಾ ಲೇಬಲ್ ಹಚ್ಚುವ ಆಸ್ಪತ್ರೆಗಳಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ. ಹೀಗಿರುವಾಗ ಉಸ್ತುವಾರಿ ಸಚಿವರು ಹೇಳಿದ್ದೇನು ಆಗ್ತಾ ಇರೋದೇನು ಅನ್ನೋದು ತಿಳಿಯದೆ ಜನರು ಗೊಂದಲಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಏಕೈಕ ಸರಕಾರಿ ಕೋವಿಡ್ ಆಸ್ಪತ್ರೆ ಆಗಿರುವ ವೆನ್ಲಾಕ್ ನಲ್ಲಿ ಉಚಿತ ಚಿಕಿತ್ಸೆ ಇದ್ದರೂ ಅಲ್ಲಿನ ವ್ಯವಸ್ಥೆ ಬಗ್ಗೆ ಪ್ರಾರಂಭದಿಂದಲೂ ದೂರುಗಳು ಕೇಳಿಬರುತ್ತಿವೆ. ಹೀಗಿರುವಾಗ ಜನರು ಹಣ ಹೋದರೂ ಪರವಾಗಿಲ್ಲ ಎಂದು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರು. ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳು ವಾರದ ಪಿಪಿಇ ಕಿಟ್ ಬಿಲ್ ಅನ್ನೇ ಲಕ್ಷದಷ್ಟು ಏರಿಸಿ ಜನರನ್ನು ದೋಚಲು ಇಳಿದಿತ್ತು. ಹೀಗಿರುವಾಗ ಉಸ್ತುವಾರಿ ಸಚಿವರ ಆದೇಶ ನೋಡಿ ಖುಷಿಪಟ್ಟ ಜನರು ಇಂದು ಬಿಲ್ ನೋಡಿ ಕಂಗಾಲಾಗುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಂದೇಹ ನಿವಾರಿಸುವ ಜೊತೆಗೆ ಬಡರೋಗಿಗಳನ್ನು ರಕ್ಷಿಸಬೇಕಿದೆ.

ವೆನ್ಲಾಕ್ ನಲ್ಲಿ ಬೆಡ್ ಇಲ್ಲದಿದ್ದರಷ್ಟೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಸೌಲಭ್ಯ!
ಕೋಟ ಶ್ರೀನಿವಾಸ ಪೂಜಾರಿಯವರು ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ ಕೊರೋನಾಗೆ ಉಚಿತ ಚಿಕಿತ್ಸೆ ಎಂದಿದ್ದರು. ಆದರೆ ಇದು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇರದಿದ್ದರೆ ಮಾತ್ರ ಎಂದು ಹೇಳಲಾಗುತ್ತಿದೆ. ಚಿಕಿತ್ಸೆಗಾಗಿ ಪ್ರಾರಂಭದಲ್ಲಿ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಬರುವ ಸೋಂಕಿತರನ್ನು ಅಲ್ಲಿ ಬೆಡ್ ಇಲ್ಲದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾಡಳಿತ ಮೂಲಗಳು ಹೇಳುತ್ತಿವೆ. ಒಟ್ಟಾರೆ ಸಚಿವರ ಹೇಳಿಕೆ ಮತ್ತು ನಂತರದ ಬೆಳವಣಿಗೆಗಳು ಗೊಂದಲಕ್ಕೆ ಕಾರಣವಾಗಿದ್ದು ಈ ಕುರಿತು ಖುದ್ದು ಸಚಿವರೇ ಪ್ರತಿಕ್ರಿಯೆ ನೀಡಿ ಜನರ ಸಂದೇಹಗಳಿಗೆ ತೆರೆ ಎಳೆಯಬೇಕಿದೆ.

Leave a Reply

Your email address will not be published. Required fields are marked *