ಇವ್ರು ಬರೀ ವೈದ್ಯರಲ್ಲ, ರೋಗಿಗಳ ಪಾಲಿನ ಆಪತ್ಬಾಂಧವ!

ಮಂಗಳೂರು: ವೈದ್ಯೋ ನಾರಾಯಣ ಹರಿ ಅಂತೀವಿ, ಯಾಕೆಂದರೆ ವೈದ್ಯರು ದೇವ್ರಿಗೆ ಸಮಾನ ಅನ್ನೋದು ನಮ್ಮೆಲ್ಲರ ನಂಬಿಕೆಯೂ ಹೌದು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಕೆಲ ವೈದ್ಯರು ಮಾಡೋ ಕೆಲ್ಸದಿಂದ ಇಡೀ ವೈದ್ಯ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅದರಲ್ಲೂ ಈ ಕೊರೋನಾ ಉಪಟಳದಿಂದ ಕೆಲ ನಿಷ್ಠಾವಂತ ವೈದ್ಯರು ಮನೆಯಲ್ಲೇ ಉಳಿದರೆ ಮತ್ತೂ ಕೆಲ ಖಾಸಗಿ ಆಸ್ಪತ್ರೆಗಳ ವೈದ್ಯರು ದಯೆ ದಾಕ್ಷಿಣ್ಯವಿಲ್ಲದೆ ಬಡಪಾಯಿ ರೋಗಿಗಳನ್ನು ಲೂಟಿ ಮಾಡಲು ಮುಂದಾಗಿದ್ದಾರೆ. ಆದರೆ ಇವ್ರ ಮಧ್ಯೆ ನಂಬಿಕೆ, ಕಾಳಜಿ, ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಬೆರಳೆಣಿಕೆಯ ವೈದ್ಯರಿದ್ದಾರೆ. ಇವ್ರ ಸಾಲಿಗೆ ಸೇರುವವರು ಅಡ್ಯಾರ್ ಕಟ್ಟೆಯ ಬಳಿ ಕ್ಲಿನಿಕ್ ಹೊಂದಿರುವ ಹೆಸರಾಂತ ವೈದ್ಯ ಡಾ.ಶ್ಯಾಮ್ ಪ್ರಸಾದ್ ಅವ್ರು.
ನಗುಮೊಗದ, ರೋಗಿಗಳ ಮಧ್ಯೆ ಬೇಧಭಾವ ಎಣಿಸದ ಶ್ಯಾಮ್ ಅವ್ರು ಕೊರೋನಾ ಲಾಕ್ ಡೌನ್ ಸಮಯದಲ್ಲೂ ನಿರಂತರವಾಗಿ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಭಯ ಬಿಟ್ಟುಬಿಡಿ, ಕೊರೋನಾ ಕುರಿತು ಜಾಗೃತರಾಗಿರಿ ಎನ್ನುವ ಇವರು ನಗುಮೊಗದಿಂದಲೇ ರೋಗ ವಾಸಿ ಮಾಡೋ ದೇವರು ಎನ್ನುತ್ತಾರೆ ಇವರಿಂದ ಉಪಚರಿಸಿಕೊಂಡಿರೋ ರೋಗಿಗಳು. ಲಾಕ್ ಡೌನ್, ಕೊರೋನಾ ಎಂದು ಉಳಿದೆಲ್ಲ ವೈದ್ಯರು ಪ್ರಾಣ ಭಯದಿಂದ ಮನೆ ಸೇರಿದರೂ ಇವ್ರು ಕ್ಲಿನಿಕ್ ಬಾಗಿಲಲ್ಲಿ ನಿಂತು ತನ್ನ ಗ್ರಾಮದ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಣ ಅಷ್ಟು ಕೊಡಿ, ಇಷ್ಟು ಕೊಡಿ ಎಂದು ರೋಗಿಗಳನ್ನು ಪೀಡಿಸುವ ವೈದ್ಯರ ಸಾಲಲ್ಲಿ ಡಿಫೆರೆಂಟ್ ಆಗಿ ನಿಲ್ಲುವ ಶ್ಯಾಮ್ ಪ್ರಸಾದ್ ಹಣಕ್ಕಿಂತ ಬಡಜನರ ಸೇವೆಯೇ ದೇವರು ಎಂದುಕೊಂಡವರು.
ಕೊರೋನಾ ಮಹಾಮಾರಿಯಿಂದ ವಿಶ್ವವೇ ತಲ್ಲಣಗೊಂಡಿರುವಾಗ ಶ್ಯಾಮ್ ಪ್ರಸಾದ್ ರಂತಹ ವೈದ್ಯರು ಗಲ್ಲಿ ಗಲ್ಲಿಯಲ್ಲಿ ಬೆಳೆಯಬೇಕು. ಮಾಮೂಲಿ ಶೀತ, ಜ್ವರಕ್ಕೂ ಕೊರೋನಾ ಎಂದು ಭಯಪಡಿಸುವ ತಮ್ಮ ಕಮಿಷನ್ ಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಟೆಸ್ಟ್ ಮಾಡಿಸಿ ಎನ್ನುವ ವೈದ್ಯರು ಇವರಂತಾದರೆ ಜನರು ಧೈರ್ಯದಿಂದ ಮಹಾಮಾರಿಯ ವಿರುದ್ಧ ಹೊರಾಡಬಹುದು. ಸಮಾಜಮುಖಿ ವೈದ್ಯ ಶ್ಯಾಮ್ ಪ್ರಸಾದ್ ಗೆ ನಮ್ಮದೊಂದು ಸಲಾಂ…!

Leave a Reply

Your email address will not be published. Required fields are marked *