ಇನ್ನು ಮನೆಮನೆಗೆ ಬರಲಿದೆ ಮದ್ಯ!

ಬೆಂಗಳೂರು: ರಾಜ್ಯದಲ್ಲಿ ಮದ್ಯವನ್ನು ಆನ್‍ಲೈನ್ ಸೇವೆಯ ಮೂಲಕ ಮನೆ ಮನೆಗೆ ಪೂರೈಕೆ ಮಾಡಲು ಸರಕಾರ ಮುಂದಾಗಿದ್ದು ಈ ಬಗ್ಗೆ ಮುಂದಿನ ಸೋಮವಾರ ಮಾತುಕತೆ ನಡೆಯಲಿದೆ. ಡೆಲಿವರಿ ಆ್ಯಪ್ ಮೂಲಕ ಮದ್ಯವನ್ನು ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಿದ್ದು ರಾಜ್ಯಾದ್ಯಂತ ಮುಂದಿನ ಹಂತದಲ್ಲಿ ಚಿಲ್ಲರೆ ಮಾರಾಟ ಮಳಿಗೆ ಹಾಗೂ ಎಂಎಸ್‍ಐಎಲ್ ಮಳಿಗೆಗಳ ಮೂಲಕ ಮನೆ ಮನೆಗೆ ಮದ್ಯ ಪೂರೈಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಈ ಸೇವೆಯನ್ನು ಇದೇ ಆಗಸ್ಟ್‍ನಿಂದ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಸೇರಿದಂತೆ ಕೇರಳ ಹಾಗು ಆರು ರಾಜ್ಯಗಳಲ್ಲಿ ಈಗಾಗಲೇ ಈ ಸೇವೆ ಜಾರಿಯಲ್ಲಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ರಾಜ್ಯದ ಬಾರ್, ರೆಸ್ಟೋರೆಂಟ್ ಮಾಲಕರು ಸಂಕಷ್ಟಕ್ಕೆ ಒಳಗಾಗಿದ್ದು ಸರಕಾರದ ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಬಾರ್ ಮಾಲಕರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಬಾರ್ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ. ಹೋಂ ಡೆಲಿವರಿಯಿಂದ ಕೊರೊನಾ ತಡೆಯಬಹುದು ಎನ್ನುವುದು ಸರಕಾರದ ಲೆಕ್ಕಾಚಾರ, ಆದರೆ ಇದರಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ ಮಂದಿ ಮತ್ತಷ್ಟು ಸಮಸ್ಯೆ ಎದುರಿಸಲಿರುವುದಂತೂ ಸುಳ್ಳಲ್ಲ.