ಆಹಾರ, ಹಣ್ಣು-ತರಕಾರಿ ಖರೀದಿಗೆ ಬೆಳಗ್ಗೆ 8ರಿಂದ 11ರವರೆಗೆ ಅವಕಾಶ: ಲಾಕ್ ಡೌನ್ ಮಾರ್ಗಸೂಚಿ ಇಲ್ಲಿದೆ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ನಾಳೆ ರಾತ್ರಿ 8 ಗಂಟೆಯಿಂದ ಜುಲೈ 23ರ ಮುಂಜಾನೆ 5 ಗಂಟೆಯವರೆಗೆ 7 ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿದ್ದು ಈ ಕುರಿತ ಸಂಪೂರ್ಣ ಮಾರ್ಗಸೂಚಿ ಇಲ್ಲಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮಂಗಳೂರು ಕಮಿಷನರ್, ಎಸ್.ಪಿ., ಮಂಗಳೂರು ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು, ತಹಶೀಲ್ದಾರ್ ಅವರಿಗೆ ಆದೇಶಿಸಿದ್ದಾರೆ. ಆಹಾರ, ತರಕಾರಿ-ಹಣ್ಣು ಖರೀದಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ತುರ್ತು ಸಂದರ್ಭದಲ್ಲಿ ಮತ್ತು ವೈದ್ಯಕೀಯ ತುರ್ತು ಸೇವೆಗಳ ಪ್ರಯಾಣಕ್ಕೆ ಮಾತ್ರ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ.
ಕಂಟೈನ್ ಮೆಂಟ್ ಅಲ್ಲದ ವಲಯಗಳಲ್ಲಿ ಸರ್ಕಾರಿ ಕಚೇರಿಗಳು, ಆರೋಗ್ಯ, ವಿದ್ಯುತ್, ನೀರು, ವೈದ್ಯಕೀಯ ಶಿಕ್ಷಣ,ಪೊಲೀಸ್, ಸೇರಿದಂತೆ ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ. ನಗರ ಪಾಲಿಕೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ, ಹಾಗೂ ಜಿಲ್ಲಾಧಿಕಾರಿಗಳ ಮತ್ತು ಅಧೀನ ಕಚೇರಿಗಳು ಕಾರ್ಯನಿರ್ವಹಿಸಬಹುದಾಗಿದೆ. ನ್ಯಾಯಲಯಗಳು, ಕೋವಿಡ್ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿ ಅಧಿಕಾರಿ ಸಿಬ್ಬಂದಿಗಳು, ಖಜಾನೆ ಮತ್ತು ಅಧೀನ ಖಜಾನೆ ಕಾರ್ಯ ನಿರ್ವಹಿಸಬಹುದಾಗಿದೆ. ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ ಮುಂತಾದವುಗಳು ಮುಚ್ಚಿರತಕ್ಕದ್ದು.
ಅಂಚೆ ಕಚೇರಿ, ಬ್ಯಾಂಕ್, ವೇತನ, ಲೆಕ್ಕಪತ್ರ, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.
ಕಂಟೈನ್ ಮೆಂಟ್ ವಲಯದ ಹೊರಗೆ ಎಲ್ಲಾ ಆರೋಗ್ಯ ಸೇವೆಗಳು ಕಾರ್ಯನಿರ್ವಹಿಸುವುದು, ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಹಾಲು ಪೂರೈಕೆ, ಸಂಸ್ಕರಣಾ ಕೇಂದ್ರಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆ ಮುಚ್ಚಿರತಕ್ಕದ್ದು. ಮಾಧ್ಯಮ ಸಂಸ್ಥೆ, ಬ್ಯಾಂಕ್, ವಿಮೆ ಕಚೇರಿ ಎಲ್ಲಾ ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆ ವಿನಾಯಿತಿ ನೀಡಲಾಗಿದೆ. ಇ-ಕಾಮರ್ಸ್ ಮೂಲಕ ಆಹಾರ, ಔಷಧಿ, ವೈದ್ಯಕೀಯ ಸರಬರಾಜಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಬಗೆಯ ಸರಕು ಸಾಗಣೆಯ ವಾಹನಗಳು ಚಲಿಸಬಹುದಾಗಿದ್ದು ಈಗಾಗಲೇ ನಿಗದಿಯಾಗಿರುವ ವಿಮಾನ, ರೈಲು ಪ್ರಯಾಣಕ್ಕೆ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಶಾಲೆ, ಕೊಚಿಂಗ್ ಕ್ಲಾಸ್, ಶಾಪಿಂಗ್ ಮಾಲ್, ಹೊಟೇಲ್, ಧಾರ್ಮಿಕ, ಸಾಮಾಜಿಕ ಸಮಾರಂಭಕ್ಕೆ ನಿಷೇಧ, ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಬೇಕು.

Leave a Reply

Your email address will not be published. Required fields are marked *