ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಲು ಸರಕಾರ ಮೀನಮೇಷ -ಸಿಐಟಿಯು ಆಕ್ರೋಶ

ಗುಬ್ಬಿ: `ಕಳೆದ ಐದು ತಿಂಗಳಿಂದ ಜೀವದ ಹಂಗು ತೊರೆದು ಸಮಾಜದ ಆರೋಗ್ಯದ ಹಿತ ಕಾಯಲು ಹಗಲಿರುಳು ದುಡಿದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿದ ಸರ್ಕಾರ ಅವರ ಮಾಸಿಕ ವೇತನವನ್ನು ಹೆಚ್ಚಿಸಲು ಮೀನಾಮೇಷ ಎಣಿಸುತ್ತಿದೆ’ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ನರಸಿಂಹರಾಜು ಆಕ್ರೋಶ ಹೊರಹಾಕಿದರು. ಪಟ್ಟಣದ ತಾಲೂಕು ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದ ಎಐಯುಟಿಯುಸಿ ನೇತೃತ್ವದ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳನ್ನು ಕುರಿತು ಮಾತನಾಡಿದ ಅವರು ರಾಜ್ಯದ 42 ಸಾವಿರ ಮಂದಿ ಆಶಾ ಕಾರ್ಯಕರ್ತೆಯರ ಮೂಲಭೂತ ಸೌಕರ್ಯಕ್ಕೆ ಕಳೆದ ಜನವರಿಯಿಂದಲೇ ಸಂಘಟಿತ ಹೋರಾಟ ನಡೆಸಿದ್ದೇವೆ. 34 ಮಾದರಿ ಕೆಲಸ ಮಾಡುವ ಈ ಆಶಾ ಕೆಲಸಗಾರರಿಗೆ ಮಾಸಿಕ 12 ಸಾವಿರ ರೂಗಳ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಟ್ಟ ದಿನದಿಂದ ನಿರಂತರವಾಗಿ ಐದು ತಿಂಗಳಿಂದ ದುಡಿದ ಈ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಸರ್ಕಾರ ಯಾವುದೇ ಹಣ ನೀಡುವುದಿಲ್ಲ. ಅವರ ಸೇವೆಗೆ ಕೊಂಚವೂ ಬೆಲೆ ಇಲ್ಲವಾಗಿದೆ. ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಇವರ ಶ್ರಮವೇ ಕಾರಣವಾಗಿದೆ. ಗರ್ಭಿಣಿಯರು, ಬಾಣಂತಿಯರ ಆರೈಕೆ ಮಾಡುವ ಜತೆಗೆ ಪೆÇಲೀಯೋ ಲಸಿಕೆ, ಮಕ್ಕಳಿಗೆ ಚುಚ್ಚುಮುದ್ದು ನೀಡುವ ಕಾರ್ಯವಷ್ಟೇ ನಿಗದಿಯಾಗಿ ನಡೆದಿದೆ. ಆದರೆ ಕೊರೋನಾ ವೈರಸ್ ವಿರುದ್ದ ಇವರು ನಡೆಸಿದ ಹೋರಾಟ ಶ್ಲಾಘನೀಯ. ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ವೈರಸ್ ಬಂದರೆ ಯಾರು ಹೊಣೆ ಎನ್ನುವುದು ಈವರೆವಿಗೆ ಸರ್ಕಾರ ತಿಳಿಸಿಲ್ಲ ಎಂದು ಕಿಡಿಕಾರಿದರು.
ಮಾಸಿಕ 12 ಸಾವಿರ ನಿಗದಿ ಮಾಡುವ ಜತೆಗೆ ಕೊರೋನಾ ಕಿಟ್ ನೀಡಿ ಅವರಿಗೆ ರಕ್ಷಣೆ ಮಾಡಬೇಕು. ವಾರಿಯರ್ಸ್ ಎಂದು ಗುರುತಿಸಿ ಕೇವಲ ಹೂವಿನ ಮಳೆ, ಹಾರ, ಶಾಲು ನೀಡುವಷ್ಟೇ ಸೀಮಿತಗೊಳ್ಳದೇ ಅವರ ಸೇವೆಯನ್ನು ಗುರುತಿಸಿ ಅವರ ವೇತನ ಹೆಚ್ಚಳ ಮಾಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ನೀಡುವ ಸೌಲಭ್ಯವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಬೇಕು, ಕೋವಿಡ್‍ಗೆ ತುತ್ತಾದ ಸಂದರ್ಭದಲ್ಲಿ ಸೂಕ್ತ ಪರಿಹಾರ ಮತ್ತು ಉಚಿತ ಚಿಕಿತ್ಸೆ ನೀಡಬೇಕು ಎಂದ ಅವರು ಶಿರಾ ಮತ್ತು ಗುಬ್ಬಿ ಬಿಲ್ಲೇಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರನ್ನು ಕೇಳುವವಿರಲ್ಲದೇ ನೋವು ಅನುಭವಿಸಿದ್ದಾರೆ. ಒಂದೇ ದಿನದಲ್ಲಿ 5 ಸಾವಿರಕ್ಕೂ ಅಧಿಕ ಪಾಸಿಟೀವ್ ಕೇಸು ಕಂಡು ಹಿಡಿಯುವಲ್ಲಿ ಆಶಾ ಕೆಲಸಗಾರರ ಶ್ರಮವೇ ಹೆಚ್ಚು ಸಹಕಾರಿಯಾಗಿದೆ ಎಂದರು.
ಆಶಾ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಅಧ್ಯಕ್ಷೆ ಎಚ್.ಜಯಮ್ಮ ಮಾತನಾಡಿ ಕೋವಿಡ್ 19 ವೈರಸ್ ತಡೆಗೆ ಶ್ರಮಿಸಿದ ನಮ್ಮಗಳನ್ನು ಈಗಷ್ಟೇ ಗುರುತಿಸಲಾಗುತ್ತಿದೆ. ಅದು ಕೇವಲ ಚಪ್ಪಾಳೆ ಮೂಲಕ ಮಾತ್ರ. ಈ ಶ್ಲಾಘನೆ ಜತೆ ನಮ್ಮ ಬದುಕಿಗೂ ಆಧಾರ ಮಾಡಲು ವೇತನ ಹೆಚ್ಚಳ ಮಾಡಲು ಸರ್ಕಾರ ಮುಂದಾಗಬೇಕು. ಜನವರಿಯಿಂದ 10 ಮನವಿ ಪತ್ರವನ್ನು ಸರ್ಕಾರಕ್ಕೆ ನೀಡಿರುವ ಸಂಘದ ಬೇಡಿಕೆ ಬಗ್ಗೆ ಸರ್ಕಾರ ಮಾತನಾಡಿಲ್ಲ. ಈ ನಿಟ್ಟಿನಲ್ಲಿ ಜುಲೈ 10 ರಿಂದಲೇ ತಮ್ಮ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿ ವಿರೋಧ ವ್ಯಕ್ತಪಡಿಸಲಾಗಿದೆ. ತಾಲ್ಲೂಕಿನಲ್ಲೂ ಈ ನಮ್ಮ ಸೇವೆ ಸ್ಥಗಿತಗೊಳಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ, ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದದು. ಅವರ ಸೇವಾಕಾರ್ಯದಿಂದ ಕೊರೋನಾ ವಿರುದ್ದ ಹೋರಾಟ ಸಾಧ್ಯವಾಗಿದೆ. ಅವರ ಬೇಡಿಕೆ ಕುರಿತು ಸರ್ಕಾರಕ್ಕೆ ನಿಮ್ಮ ಮನವಿ ಕಳುಹಿಸುವ ಜತೆಗೆ ತಮ್ಮ ಸೇವೆ ಮುಂದುವರಸುವಂತೆ ಮನವಿ ಮಾಡಿದರು. ಜತೆಗೆ ಕಪ್ಪುಪಟ್ಟಿ ಧರಿಸಿ ಒಂದು ತಿಂಗಳು ಪ್ರತಿಭಟನೆಯನ್ನು ಸೇವೆಯ ಜತೆ ಮಾಡಲು ಸೂಚಿಸಿ ಅಲ್ಲಿದ್ದ ಪ್ರತಿಭಟನಾಕಾರರಲ್ಲೇ ಅಚ್ಚರಿ ಮೂಡಿಸಿದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಲಕ್ಷ್ಮೀದೇವಿ, ರಾಜಮ್ಮ, ಲತಾ, ಚಂದ್ರಕಲಾ, ಶಿವಮ್ಮ, ಪರಿಮಳ, ಗಂಗರತ್ನಮ್ಮ, ಸುಜಾತಾಬಾಯಿ, ಮಾಲಿನಿ ಇತರರು ಇದ್ದರು.

Leave a Reply

Your email address will not be published. Required fields are marked *