“ಆಧಾರ್ ಕಾರ್ಡ್ ಇದ್ದರೆ ಉಚಿತ ಚಿಕಿತ್ಸೆ ಎಂದು ಆಧಾರವಿಲ್ಲದೆ ಹೇಳಿದವರು ಈಗ ಲಾಕ್ ಡೌನ್ ವಿಸ್ತರಣೆ ಎನ್ನುತ್ತಿರುವುದು ಸರ್ವಾಧಿಕಾರವಲ್ಲವೇ?”

#ಮುನೀರ್ ಕಾಟಿಪಳ್ಳ

“ಆಧಾರ್ ಕಾರ್ಡ್ ತೋರಿಸಿದವರಿಗೆ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ” ಎಂದು ಆಧಾರ ಇಲ್ಲದ ಹೇಳಿಕೆ ನೀಡಿ ಜನರ ಗಮನ ಬೇರೆಡೆ ಸೆಳೆದಾಯ್ತು. ಈಗ, “ಮತ್ತೆ ಹದಿನಾಲ್ಕು ದಿನಗಳ ಕಾಲ ಲಾಕ್ ಡೌನ್ ಮುಂದುವರಿಸಲು ದ ಕ ಜಿಲ್ಲೆಯ ಜನರು, ಸಂಘಟನೆಗಳು ಒತ್ತಾಯ ಮಾಡುತ್ತಿದ್ದಾರೆ, ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ” ಎಂದು ಉಸ್ತುವಾರಿ ಕೋಟಾ ಶ್ರೀನಿವಾಸ ಪೂಜಾರಿ ಬುಟ್ಟಿಯಿಂದ ಮತ್ತೊಂದು ಬಟ್ಟೆಯ ಹಾವು ಹೊರ ತೆಗೆದಿದ್ದಾರೆ.

ಇದು ಶುದ್ದ ನಾನ್ಸೆನ್ಸ್, ಜನರ ಬದುಕಿನ‌ ಕಷ್ಟ ಕಾರ್ಪಣ್ಯದ ಅರಿವಿಲ್ಲದ ಅದ್ಯಾವ ಸೀಮೆ ಸಂಘಟನೆಗಳು ಲಾಕ್ ಡೌನ್ ಮುಂದುವರಿಸಲು ಹೇಳಿರುವುದು ಎಂದು ಸಚಿವರು ಪಟ್ಟಿ ನೀಡಲಿ. ಜನರ ದಿನನಿತ್ಯದ ಬದುಕು ಸಾಗಿಸಲು, ಅನ್ನ, ಔಷಧಿಗೆ ದಿಕ್ಕು ತೋರಿಸದೆ ಲಾಕ್ ಡೌನ್ ಎಂದು ಮನೆಗಳಲ್ಲಿ ಕೂಡಿ ಹಾಕುವುದು ಅಮಾನವೀಯ, ಸ್ಯಾಡಿಸ್ಟ್ ಮನೋಭಾವ. ಸಚಿವರ ಇಂತಹ ದುರಾಡಳಿತಕ್ಕೆ, ಸರ್ವಾಧಿಕಾರಿ ನಡೆಗೆ ನಮ್ಮ ಪ್ರಬಲ ವಿರೋಧ ಇದೆ.

ದುಡಿಮೆ ಇಲ್ಲದೆ, ಮನೆ ಬಾಡಿಗೆ, ಅಂಗಡಿ ಬಾಡಿಗೆ ಕಟ್ಟಲಾಗದ, ದಿನಸಿ, ಔಷಧಿ ಖರೀದಿಸಲಾಗದ, ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಸಲಾಗದ ಜನ ಸಾಮಾನ್ಯರೊಂದಿಗೆ ಮಾತಾಡಿ, ಚರ್ಚಿಸಿ ಲಾಕ್ ಡೌನ್ ಕುರಿತು ತೀರ್ಮಾನಿಸಿ. ದಂತದ ಗೋಪುರದಿಂದ ಕೆಳಗಿಳಿಯಿರಿ ಮಿಸ್ಟರ್ ಕೋಟಾ,,ನಿಮ್ಮ ಹಿಂದೆ ಮುಂದೆ ಸುತ್ತವ ಸಂಘಟನೆಗಳಷ್ಟೆ ಜಿಲ್ಲೆಯಲ್ಲಿರುವುದಲ್ಲ. ಜಿಲ್ಲೆಯ ಜನಾಭಿಪ್ರಾಯವೂ ಅಲ್ಲ.

Leave a Reply

Your email address will not be published. Required fields are marked *