ಅಯೋಧ್ಯೆ ರಾಮಮಂದಿರದ ಅರ್ಚಕನಿಗೆ ಕೊರೊನಾ!

ಲಖ್ನೋ: ಆಗಸ್ಟ್ ಐದರಂದು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಐತಿಹಾಸಿಕ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದ್ದು, ಸ್ವತಹ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆದರೆ ಈ ನಡುವೆ ಮಂದಿರದ ಸಹಾಯಕ ಅರ್ಚಕ ಹಾಗೂ ಅಲ್ಲಿನ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಶಿಷ್ಯ ಪ್ರದೀಪ್ ದಾಸ್ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಅವರನ್ನು ಹೋಂ ಐಸೋಲೇಷನ್‍ಗೆ ಒಳಪಡಿಸಲಾಗಿದೆ. ರಾಮಂದಿರದ ಉಸ್ತುವಾರಿಯನ್ನು ನಾಲ್ಕು ಮಂದಿ ಅರ್ಚಕರಿಗೆ ವಹಿಸಲಾಗಿದೆ. ಅದರಲ್ಲಿ ದಾಸ್ ಪ್ರಮುಖರಾಗಿದ್ದಾರೆ. ಸದ್ಯ ದೇವಾಲಯದಲ್ಲಿ ಕರ್ತವ್ಯದಲ್ಲಿದ್ದ 16 ಮಂದಿ ಭದ್ರತಾ ಸಿಬ್ಬಂದಿಗೆ ಕೂಡ ಮಹಾಮಾರಿ ಕೋವಿಡ್ 19 ವಕ್ಕರಿಸಿದೆ. ಸದ್ಯ ದಾಸ್ ಸೇರಿದಂತೆ ಇತರೆ ಭದ್ರತಾ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಕೊಂಚ ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್ 5ರಂದು ರಾಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದ್ದು, ಇತ್ತ ಕೊರೊನಾ ವೈರಸ್ ಭೀತಿಯಿಂದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಯಾರೂ ಅಯೋಧ್ಯಗೆ ಬರಬೇಡಿ. ಕಾರ್ಯಕ್ರಮವನ್ನು ಟಿಯಲ್ಲೇ ವೀಕ್ಷಿಸಿ ಎಂದು ರಾಮಮಮದಿರದ ಟ್ರಸ್ಟ್ ಸದಸ್ಯರು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕೇವಲ 200 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ಸದಸ್ಯರೊಬ್ಬರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಲಾ 50 ಮಂದಿಗೆ ಪ್ರತ್ಯೇಕ ಬ್ಲಾಕ್ ಗಳನ್ನು ರಚಿಸಲಾಗುವುದು. ಅದರಲ್ಲಿ ಒಂದು ಬ್ಲಾಕ್ ರಾಜಕೀಯ ಮುಖಂಡರಿಗೆ ಮೀಸಲಿಟ್ಟರೆ, ಇನ್ನೊಂದು ಬ್ಲಾಕ್ ನಲ್ಲಿ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಮತ್ತೊಂದು ಅರ್ಚಕರು ಮತ್ತು ಧಾರ್ಮಿಕ ಮುಖಂಡರಿಗೆ ಮೀಸಲಿಡಲಾಗುತ್ತಿದೆ ಎಂದು ಕೆಲ ವರದಿಗಳು ತಿಳಿಸಿವೆ. ಭೂಮಿ ಪೂಜೆ ಸಮಾರಂಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಹಾಗೂ ಕಲ್ಯಾಣ್ ಸಿಂಗ್ ಮತ್ತಿರರು ಭಾಗಿಯಾಗಲಿದ್ದಾರೆ.