ಅಯೋಧ್ಯೆ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳದಂತೆ ಉದ್ಧವ್‌ಗೆ ಮನವಿ

ಮುಂಬೈ: ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಆಹ್ವಾನ ಬಂದಿದೆ. ಆದರೆ ಒಂದು ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಂತೆ ಅವರನ್ನು ಕೋರಲಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ದ ಮಜೀದ್‌ ಮೆಮನ್‌ ಮಂಗಳವಾರ ಹೇಳಿದ್ದಾರೆ.
ಅವರ ಈ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಅಪಾಯ ಅರಿತ ಎನ್‌ಸಿಪಿ ತಕ್ಷಣವೇ ಅಂತರ ಕಾಯ್ದುಕೊಂಡಿದೆ. ”ಮೆಮನ್‌ ಹೇಳಿಕೆ ಅದು ಅವರ ವೈಯಕ್ತಿಕ ನಿಲುವು. ಆ ಹೇಳಿಕೆಗೂ, ಪಕ್ಷಕ್ಕೆ ಸಂಬಂಧ ಇಲ್ಲ,” ಎಂದು ಜಾರಿಕೊಂಡಿದೆ. “ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದ ಆಹ್ವಾನಿತರ ಪಟ್ಟಿಯಲ್ಲಿ ಸಿಎಂ ಉದ್ಧವ್‌ ಠಾಕ್ರೆ ಅವರ ಹೆಸರೂ ಸೇರಿದೆ. ಕೋವಿಡ್‌-19 ನಿರ್ಬಂಧಗಳನ್ನು ಗೌರವಿಸಿ ಅವರು ವೈಯಕ್ತಿಕ ನಿರ್ಧಾರದ ಮೇಲೆ ಪಾಲ್ಗೊಳ್ಳಬಹುದು. ಆದರೆ ಜಾತ್ಯತೀತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುನ್ನಡೆಸುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಯೋಚಿಸಬೇಕಿದೆ. ಒಂದು ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡುವ ಇಂತಹ ಕಾರ್ಯಕ್ರಮಗಳಿಂದ ದೂರ ಉಳಿಯುವುದು ಸೂಕ್ತ,” ಎಂದು ವಕೀಲ ಹಾಗೂ ರಾಜ್ಯಸಭೆ ಮಾಜಿ ಸದಸ್ಯರೂ ಆಗಿರುವ ಮೆಮನ್‌ ಟ್ವೀಟ್‌ ಮಾಡಿದ್ದಾರೆ. ”ಅದು ಅವರ (ಮೆಮನ್‌) ವೈಯಕ್ತಿಕ ಅಭಿಪ್ರಾಯ. ಪಕ್ಷದ ನಿಲುವು ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ವಿವಾದಕ್ಕೆ ತೆರೆ ಬಿದ್ದಿದೆ. ಆದ್ದರಿಂದ ಯಾರಾದರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು,” ಎನ್‌ಸಿಪಿ ವಕ್ತಾರ ಸಂಜಯ್‌ ತಕ್ತರೆ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *