ಅಮೆರಿಕಾದಲ್ಲಿ ಪಿಐಎ ಹಾರಾಟಕ್ಕೆ ರೆಡ್ ಸಿಗ್ನಲ್!

ವಾಷಿಂಗ್ಟನ್: ಈಗಾಗಲೇ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಿಗೆ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ೬ ತಿಂಗಳು ಹಾರಾಟ ನಡೆಸುವಂತಿಲ್ಲ ಎಂದು ಯುರೋಪಿಯನ್ ಏವಿಯೇಶನ್ ಸೇಫ್ಟಿ ಏಜೆನ್ಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಅಮೆರಿಕಾ ಕೂಡ ಪಾಕ್ಗೆ ಆಘಾತ ನೀಡಿದೆ. ಇನ್ನು ಮುಂದೆ ಅಮೆರಿಕಾದಲ್ಲೂ ಪಿಐಎ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.
ಕಳೆದ ಮೇನಲ್ಲಿ ಪಾಕ್ನಲ್ಲಿ ನಡೆದ ಪಿಐಎ ವಿಮಾನ ಅಪಘಾತದಲ್ಲಿ ಸುಮಾರು ೯೭ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು. ನಂತರ ನಡೆದ ತನಿಖೆಯಲ್ಲಿ ದೇಶದ ಬಹುತೇಕ ಎಲ್ಲಾ ಪೈಲೆಟ್ಗಳು ನಕಲಿ ಪೈಲೆಟ್ ಲೈಸೆನ್ಸ್ಗಳನ್ನು ಹೊಂದಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿತ್ತು. ಅಲ್ಲದೆ ಪಾಕಿಸ್ತಾನದಲ್ಲಿ ನಕಲಿ ಪೈಲೆಟ್ಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಇಮ್ರಾನ್ ಖಾನ್ ಅಲ್ಲಿನ ಸದನದಲ್ಲೇ ಘಂಟಾಘೋಷವಾಗಿ ಹೇಳಿಕೆ ನೀಡಿದ್ದು, ಸದ್ಯ ಅದಕ್ಕೀಗ ಮುಳುವಾಗಿದೆ. ಈ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟ (ಇಯು)ದ ಯುರೋಪಿಯನ್ ಏವಿಯೇಶನ್ ಸೇಫ್ಟಿ ಏಜೆನ್ಸಿಯು ಪಿಐಎಗೆ ಕಳೆದ ವಾರವಷ್ಟೇ ಯುರೋಪಿಯನ್ ರಾಷ್ಟ್ರಗಳ ಪ್ರವೇಶಕ್ಕೆ ಆರು ತಿಂಗಳ ಕಾಲ ನಿರ್ಬಂಧ ಹೇರಿತ್ತು. ಇದೀಗ ಇದೇ ಹಾದಿ ಹಿಡಿದಿರುವ ಅಮೆರಿಕಾದ ಫೆಡರಲ್ ಏವಿಯೇಶನ್ ಎಡ್ಮಿನಿಸ್ಟ್ರೇಶನ್ (ಎಫ್ಎಎ) ಕೂಡ ಪಾಕ್ ಸರ್ಕಾರದ ನಿಯಂತ್ರಣದಲ್ಲಿರುವ ಪಿಐಎಗೆ ನಿರ್ಬಂಧ ಹೇರಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ದಿವಾಳಿಯಾಗುವ ಅಂಚಿಗೆ ತಲುಪಿರುವ ಪಾಕ್ಗೆ ಈ ಎರಡೂ ಒಕ್ಕೂಟಗಳು ನೀಡಿದ ನಿರ್ಬಂಧ ದೊಡ್ಡ ಆಘಾತವನ್ನೇ ನೀಡಿದೆ.