ಅಪ್ರಾಪ್ತೆಯ ಅತ್ಯಾಚಾರಿಯನ್ನು ಗುಂಡಿಟ್ಟು ಕೊಂದ ಚಿಕ್ಕಪ್ಪ!

ಹಾಸನ: ಯುವಕನೋರ್ವ ಅಪ್ರಾಪ್ತೆಯನ್ನು ಪ್ರೀತಿಸುವ ನೆಪದಲ್ಲಿ ಅತ್ಯಾಚಾರಗೈದು ಜೈಲು ಪಾಲಾಗಿದ್ದಲ್ಲದೆ ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಬಾಲಕಿಯ ಮನೆ ಬಳಿ ತೆರಳಿ ಮದುವೆ ಮಾಡಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದು ಈ ವೇಳೆ ಮಾತಿಗೆ ಮಾತು ಬೆಳೆದು ಬಾಲಕಿಯ ಚಿಕ್ಕಪ್ಪ ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಜಿಲ್ಲೆಯ ಆಲೂರು ತಾಲ್ಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು(28) ಕೊಲೆಯಾದ ಯುವಕ.
ಘಟನೆಯ ಹಿನ್ನೆಲೆ:
ಅಪ್ರಾಪ್ತೆಯ ಸ್ನೇಹ ಬೆಳೆಸಿದ್ದ ಮಧು ಪ್ರೀತಿಯ ನಾಟಕವಾಡಿ ಕಳೆದ ವರ್ಷ ಅತ್ಯಾಚಾರ ಎಸಗಿದ್ದ. ನಂತರ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಮಧು ಅಪ್ರಾಪ್ತೆ ಮನೆ ಮುಂದೆ ಪದೇ ಪದೇ ಗಲಾಟೆ ಮಾಡಿ ಮದುವೆಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಬಾಲಕಿ ಚಿಕ್ಕಪ್ಪ ಮಧುವನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇಂದೂ ಕೂಡಾ ಮನೆ ಮುಂದೆ ಬಂದು ಚುಡಾಯಿಸುತ್ತಿದ್ದಾಗ ಬಂದೂಕಿನಿಂದ ಗುಂಡಿ ಹಾರಿಸಿ ಹತ್ಯೆ ಮಾಡಲಾಗಿದೆ.
ರೂಪೇಶ್ ಬೆಂಗಳೂರಿನಿಂದ ಬಂದು ಹೋಂ ಕ್ವಾರೆಂಟೈನ್ ಆಗಿದ್ದರೆನ್ನಲಾಗಿದೆ. ಆರೋಪಿ ರೂಪೇಶ್ ಪರಾರಿಯಾಗಿದ್ದು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

