ಅಪಘಾತ ನಡೆಸಿ ಪರಾರಿಯಾಗಿದ್ದ ಪುರಸಭೆ ಸಿಬ್ಬಂದಿ ವಿರುದ್ಧ ವ್ಯಾಪಕ ಜನಾಕ್ರೋಶ

ಮಂಗಳೂರು: ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗುವ ಮೂಲಕ ಬೇಜವಾಬ್ದಾರಿತನ ಮೆರೆದ ಸೋಮೇಶ್ವರ ಪುರಸಭೆಯ ಸಿಬ್ಬಂದಿ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ, ಹಿಂದೆ ಉಳ್ಳಾಲ ನಗರಸಭೆಯಲ್ಲಿದ್ದ ಸಂದರ್ಭ ಲಂಚ ಸ್ವೀಕಾರದ ಆರೋಪ ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಶಾಸಕರೇ ಸೋಮೇಶ್ವರಕ್ಕೆ ವರ್ಗಾಯಿಸಿದ್ದರು ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಶನಿವಾರ ಬೆಳಿಗ್ಗೆ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಚಲಿಸುತ್ತಿದ್ದ ಸ್ಕೂಟರ್‍ಗೆ ನೇತ್ರಾವತಿ ಸೇತುವೆ ಬಳಿ ಐ20 ಕಾರು ಢಿಕ್ಕಿ ಹೊಡೆದಿತ್ತು. ಕಾರು ಗುದ್ದಿದ ರಭಸಕ್ಕೆ ನಿಯಂತ್ರಣಕ್ಕೆ ಕಳೆದುಕೊಂಡ ಸ್ಕೂಟರ್ ಅಡ್ಡಬಿದ್ದಿದ್ದು ಅದರಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದಿದ್ದರು. ಇದೇ ವೇಳೆ ಹಿಂಬದಿಯಿಂದ ಕೇರಳ ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಸ್ಕೂಟರ್ ಸವಾರ ಉಳ್ಳಾಲ ಬಂಡಿಕೊಟ್ಯ ನಿವಾಸಿ ಟಿ.ಎಸ್.ಹಸನಬ್ಬ ಎಂಬವರ ಪುತ್ರ ಉಬೈದುಲ್ಲಾ ಹಸನಬ್ಬ ಎಂಬವರ ಮೈಮೇಲಿನಿಂದ ಚಲಿಸಿದ್ದರಿಂದ ಆತ ದಾರುಣವಾಗಿ ಸಾವಿಗೀಡಾಗಿದ್ದ.
ಇಷ್ಟೊಂದು ಗಂಭೀರವಾದ ಪ್ರಕರಣ ನಡೆದು ಯುವಕನೋರ್ವನ ಪ್ರಾಣ ಹೋದರೂ ಘಟನೆಗೆ ಮೂಲವಾಗಿದ್ದ ಕಾರು ಪರಾರಿಯಾಗಿತ್ತು. ಕಾರಿನ ಚಾಲಕ ಸೌಜನ್ಯಕ್ಕೂ ಅಪಘಾತ ನಡೆದ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ರಸ್ತೆಗೆ ಬಿದ್ದವನ ಸ್ಥಿತಿ ಏನಾಗಿದೆ ಎನ್ನುವ ಯೋಚನೆಯನ್ನೂ ಮಾಡದೆ ಪರಾರಿಯಾಗಿದ್ದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಬಳಿಕ ಸಾರ್ವಜನಿಕರ ಸಹಕಾರದಲ್ಲಿ ತೊಕ್ಕೊಟ್ಟು ಓವರ್‍ಬ್ರಿಡ್ಜ್ ಬಳಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಕಾರು ಸೋಮೇಶ್ವರ ಪುರಸಭೆಯ ಸಿಬ್ಬಂದಿ ಕೃಷ್ಣ ಎಂಬವರದ್ದೆಂದು ಗೊತ್ತಾಗಿದ್ದು, ಅಪಘಾತ ನಡೆದಾಗ ಕೃಷ್ಣ ಅವರೇ ಕಾರು ಚಾಲನೆ ಮಾಡುತ್ತಿದ್ದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಕೃಷ್ಣ ಅವರು, ಒಂದು ಅಮಾಯಕ ಜೀವವನ್ನು ಬಲಿಪಡೆದರೂ ಆ ಬಗ್ಗೆ ಕನಿಷ್ಟ ಕನಿಕರವೂ ಹೊಂದಿರಲಿಲ್ಲ ಎನ್ನಲಾಗಿದೆ. ಮೃತ ಉಬೈದ್ ಉಳ್ಳಾಲ ಭಾಗದಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದು, ಆತನ ಬಗ್ಗೆ ಜನರು ಉತ್ತಮ ಅಭಿಪ್ರಾಯವನ್ನು ಹೊಂದಿದ್ದರು. ಅದಲ್ಲದೆ ಆತನಿಗೆ ಸ್ಥಳೀಯ ಪರಿಸರದ ಹುಡುಗಿಯನ್ನು ಗೊತ್ತು ಮಾಡಲಾಗಿದ್ದು ಇದೇ ತಿಂಗಳ 23ರಂದು ವಿವಾಹ ನಡೆಯಬೇಕಿತ್ತು. ನೂರಾರು ಕನಸುಗಳೊಂದಿಗೆ ಜೀವನದ ಪ್ರಮುಖ ಘಟ್ಟಕ್ಕೆ ಕಾಲಿಡುವ ತವಕದಲ್ಲಿದ್ದ ಉಬೈದ್ ಹಾಗೂ ಹುಡುಗಿ ಸ್ಥಳೀಯ ಪರಿಸರದ್ದೇ ಆಗಿದ್ದರಿಂದ ಎರಡೂ ಮನೆಗಳಲ್ಲಿ ಮದುವೆಯ ಸಿದ್ಧತೆ ನಡೆದಿತ್ತು. ಆದರೆ ಕಾರು ಚಾಲಕ ಕೃಷ್ಣನ ಅವಾಂತರಕ್ಕೆ ಒಂದು ಜೀವ ಹೋದರೆ, ಎರಡು ಮನೆಗಳಲ್ಲಿದ್ದ ಸಂತಸದ ವಾತಾವರಣ ಸೂತಕವಾಗಿ ಮಾರ್ಪಟ್ಟಿದೆ.
ಘಟನೆಯ ರುವಾರಿಯಾಗಿರುವ ಕೃಷ್ಣ ಹಿಂದೆ ಉಳ್ಳಾಲ ನಗರಸಭೆಯಲ್ಲಿದ್ದರು. ಅಲ್ಲಿ ಜನರ ಅಗತ್ಯ ಕೆಲಸಗಳಾಬೇಕಾದರೆ ಅವರಿಂದ ಭಾರೀ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತ ಉಳ್ಳಾಲದ ಜನತೆ ಶಾಸಕ ಖಾದರ್ ಅವರಿಗೆ ದೂರು ನೀಡಿದ್ದರಿಂದ ಕೃಷ್ಣನನ್ನು ಸೋಮೇಶ್ವರ ಪುರಸಭೆಗೆ ವರ್ಗಾಯಿಸಲಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿದೆ. ಆದರೆ ಎಲ್ಲಿ ಕರ್ತವ್ಯದಲ್ಲಿದ್ದರೂ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯವನ್ನೂ ಹೊಂದುತ್ತಿರಲಿಲ್ಲ. ಕನಿಷ್ಟ ಮನುಷ್ಯತ್ವವೂ ಇಲ್ಲದ ಇಂಥವರು ಸರ್ಕಾರಿ ಸೇವೆಯಲ್ಲಿರಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *