ಎಂಟು ಪೊಲೀಸರನ್ನು ಕೊಂದಿದ್ದ ಗ್ಯಾಂಗ್‌ಸ್ಟರ್ ದುಬೆಯ ಬೇಟೆ ಹೇಗಿತ್ತು ಗೊತ್ತೇ?

ಕಾನ್ಪುರ: 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ಗ್ಯಾಂಗ್’ಸ್ಟರ್ ವಿಕಾಸ್ ದುಬೆಯನ್ನು ಉಜ್ಜಯಿನಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರದ ಮೂಲಗಳು ಗುರುವಾರ ಮಾಹಿತಿ ನೀಡಿವೆ.

ಇಂದು ಬೆಳಿಗ್ಗೆಯಷ್ಟೇ ಎರಡು ಪ್ರತ್ಯೇಕ ಎನ್’ಕೌಂಟರ್ ನಲ್ಲಿ ಗ್ಯಾಂಗ್’ಸ್ಟರ್ ವಿಕಾಸ್ ದುಬೆಯ ಇಬ್ಬರು ಸಹಚರರನ್ನು ಹತ್ಯೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿಯೇ ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.

ಉತ್ತರಪ್ರದೇಶ ರಾಜ್ಯದಲ್ಲಿ 60 ಅಪರಾಧ ಕೇಸುಗಳಿದ್ದ ವಿಕಾಸ್ ದುಬೆ ಎಂಬ ಪಾತಕಿಯನ್ನು ಬಂಧಿಸಲು ಪೊಲೀಸರು ದಿಕ್ರು ಎಂಬ ಗ್ರಾಮಕ್ಕೆ ಕಳೆದ ಶುಕ್ರವಾರ ನಸುಕಿನ ಜಾವ ತೆರಳಿದಾಗ ಮೊದಲ ಎನ್’ಕೌಂಟರ್ ನಡೆದಿತ್ತು. ಪೊಲೀಸರು ಬರುವ ಸುಳಿವು ಅರಿತಿದ್ದ ವಿಕಾಸ್ ದುಬೆ ಸಹಚರರು, ರಸ್ತೆಗೆ ಅಡ್ಡಲಾಗಿ ಕಲ್ಲು-ಕಟ್ಟಿಗೆಗಳನ್ನು ಇಟ್ಟಿದ್ದರು.

ಪೊಲೀಸರು ಇವನ್ನು ತೆರವುಗೊಳಿಸಿ ದುಬೆ ಅವಿತಿದ್ದ ಮನೆಯತ್ತ ಆಗಮಿಸಲು ಅಣಿಯಾಗುತ್ತಿದ್ದಂತೆಯೇ ಆತನ ಮನೆಯ ಮೇಲಿಂದ ಕ್ರಿಮಿನಲ್’ಗಳು ಗುಂಡಿನ ಮಳೆಗೆರೆದಿದ್ದಾರೆ. ಆಗ ಗುಂಡೇಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಅಸುನೀಗಿದ್ದರು.

ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಪೊಲೀಸರು ಈ ಹಿಂದೆ ಹೊಂದಿದ್ದ ಶಸ್ತ್ರಾಸ್ತ್ರಗಳು ದುಬೆಗೆ ದೊರೆತಿದ್ದು, ಅವುಗಳನ್ನೇ ಪೊಲೀಸರ ಮೇಲೆ ದಾಳಿ ನಾಡಲು ದುಬೆ ಸಹಚರರು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.

ವಿಕಾಸ್ ದುಬೆ ಮಹಾಕಾಲೇಶ್ವರ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದ. ಈತನನ್ನು ಸುತ್ತುವರಿದ ಪೊಲೀಸರು ಶರಣಾಗದಿದ್ದರೆ ಕೊಲ್ಲುವುದಾಗಿ ಹೇಳಿದರು.

ಇದರ ನಂತರ ಆತ‌ ಉಜ್ಜಯಿನಿಯ ಮಹಕಲ್ ಪೊಲೀಸ್ ಠಾಣೆ ಬಳಿ ಸ್ಥಳೀಯ ಪೊಲೀಸರ ಮುಂದೆ ಶರಣಾದ. ಪೊಲೀಸರು ಆರೋಪಿ ವಿಕಾಸ್ ದುಬೆ ಅವರನ್ನು ಬಂಧಿಸಿ ಮಹಕಾಲ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಶರಣಾಗತಿಯ ಸುದ್ದಿ ಬಂದ ನಂತರ ಎಸ್‌ಟಿಎಫ್ ತಂಡ ಉಜ್ಜಯಿನಿಗೆ ತೆರಳಿದೆ.

ಕಿರುಚಿದ ದುಬೆ

ನಾನು ವಿಕಾಸ್ ದುಬೆ, ಮಹಕಾಲ್ ದೇವಾಲಯದ ಮುಂದೆ ನಿಂತಿದ್ದೇನೆ ಎಂದು ಕಿರುಚಿಕೊಂಡಿದ್ದು, ಸ್ಥಳೀಯ ಮಾಧ್ಯಮಗಳು ಅಲ್ಲಿಗೆ ತಲುಪಿದ ಕೂಡಲೇ ನಾನು ವಿಕಾಸ್ ಎಂದು ಕೂಗಿದ್ದಾನೆ. ಇದರ ನಂತರ ಸ್ಥಳೀಯ ಪೊಲೀಸರೂ ಸ್ಥಳಕ್ಕೆ ತಲುಪಿದರು. ಕೂಡಲೇ ಆತನನ್ನು ಬಂಧಿಸಿ ನೇರವಾಗಿ ಮಹಕಲ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

ಇದೀಗ ವಿಕಾಸ್ ದುಬೆ ಮಧ್ಯಪ್ರದೇಶ ಪೊಲೀಸರ ವಶದಲ್ಲಿದ್ದಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಅವನು ಮೊದಲಿನಿಂದಲೂ ಕ್ರೌರ್ಯದ ಮಿತಿಗಳನ್ನು ದಾಟಿದ್ದನು. ಘಟನೆಯ ಬಗ್ಗೆ ನಾವು ಪೊಲೀಸರನ್ನು ಎಚ್ಚರವಾಗಿರಿಸಿದ್ದೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *